ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಆತಂಕ ಮೂಡಿಸಿದೆ. ಆಂಧ್ರಪ್ರದೇಶದ ಗುಂತಕಲ್ ಮೂಲದ ವರ್ಷಿತಾ ಮೃತ ವಿದ್ಯಾರ್ಥಿನಿ. ಬಿಟೆಕ್ ಕಂಪ್ಯೂಟರ್ ಸೈನ್ಸ್ ವಿಭಾಗದ ಮೂರನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆ, ಗುರುವಾರ ರಾತ್ರಿ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
ತಂದೆ-ತಾಯಿಗೆ ಕೊನೆಯ ಸಂದೇಶ
ವಿದ್ಯಾರ್ಥಿನಿ ಸಾವಿಗೂ ಮುನ್ನ ತನ್ನ ತಂದೆ ಮತ್ತು ತಾಯಿಗೆ ಮೊಬೈಲ್ ಮೂಲಕ ‘I Love You Dad, I Love You Mom’ ಎಂದು ಸಂದೇಶ ಕಳುಹಿಸಿದ್ದಳು ಎನ್ನಲಾಗಿದೆ. ಈ ಮಾಹಿತಿ ಪ್ರಕರಣದ ಹಿನ್ನೆಲೆಯಲ್ಲಿ ಗಮನ ಸೆಳೆದಿದೆ. ಆದರೆ, ಸಂದೇಶ ಕಳುಹಿಸಿದ ಸಂದರ್ಭ ಹಾಗೂ ಅದರ ಹಿಂದಿನ ಪರಿಸ್ಥಿತಿಗಳ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.
ಮಾನಸಿಕ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದಳಾ?
ವರ್ಷಿತಾ ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು ಎಂದು ತಿಳಿದುಬಂದಿದೆ. ಅಲ್ಲದೆ, ಕಳೆದ ಎರಡು ದಿನಗಳಿಂದ ಊಟವನ್ನೂ ಮಾಡಿರಲಿಲ್ಲ ಎನ್ನಲಾಗಿದೆ. ಆದರೆ, ಆಕೆಯ ಸಾವಿಗೆ ನಿಖರ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾಲೇಜು ಆಡಳಿತ ಮಂಡಳಿ ವಿರುದ್ಧ ಪೋಷಕರ ದೂರು
ವಿದ್ಯಾರ್ಥಿನಿಯ ಸಾವಿನ ಬೆನ್ನಲ್ಲೇ ಗೀತಂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಹಾಸ್ಟೆಲ್ ಸಿಬ್ಬಂದಿಯ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ತಮ್ಮ ಮಗಳ ಸಾವಿಗೆ ಅವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಪೋಷಕರು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿಯ ಸಾವಿನ ಸಂದರ್ಭಗಳು, ಪೋಷಕರು ಮಾಡಿರುವ ಆರೋಪಗಳು ಹಾಗೂ ಇತರ ಸಂಬಂಧಿತ ಅಂಶಗಳ ಕುರಿತು ತನಿಖೆ ಮುಂದುವರಿದಿದೆ. ಸಾವಿಗೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯ ಬಳಿಕ ಸ್ಪಷ್ಟವಾಗಬೇಕಿದೆ.
