ದುರ್ವಾಸನೆ ಗಮನಿಸಿ ಕೊಠಡಿ ಪರಿಶೀಲಿಸಿದ ಕುಟುಂಬಸ್ಥರಿಗೆ ಆಘಾತ; ಕೊಳೆತ ಸ್ಥಿತಿಯಲ್ಲಿ ಮೃ*ದೇಹ ಪತ್ತೆ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ನರ್ಸಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆ ನಡೆದಿರುವುದು ಮೂರು ದಿನಗಳ ಬಳಿಕ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.
ಮೃತ ವಿದ್ಯಾರ್ಥಿಯನ್ನು 20 ವರ್ಷದ ಉದಯ್ ಎಂದು ಗುರುತಿಸಲಾಗಿದೆ. ಉದಯ್ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ಯಾರಾ ಮೆಡಿಕಲ್ (ನರ್ಸಿಂಗ್ ಸಂಬಂಧಿತ) ವ್ಯಾಸಂಗ ಮಾಡುತ್ತಿದ್ದು, ಶಿಕ್ಷಣದ ಜೊತೆಗೆ ಕುಟುಂಬದ ಹೊರೆ ಕಡಿಮೆ ಮಾಡಲು ನಗರದ ಬಾಟಾ ಶೋರೂಂನಲ್ಲಿ ಪಾರ್ಟ್‌ಟೈಂ ಉದ್ಯೋಗ ಕೂಡ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಉದಯ್ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬರಬೇಕೆಂಬ ಕನಸಿನಿಂದ ಪೋಷಕರಾದ ಸುರೇಶ್ ಮತ್ತು ಪ್ರೇಮಲತಾ ದಂಪತಿ ತಮ್ಮ ಮನೆಯ ಮೇಲ್ಭಾಗದಲ್ಲಿ ಪ್ರತ್ಯೇಕ ಕೊಠಡಿ ನಿರ್ಮಿಸಿ ಮಗನ ಓದಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದ್ದರು. ಇದೇ ಕೊಠಡಿಯಲ್ಲಿ ಉದಯ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಆದರೆ, ಘಟನೆ ನಡೆದ ಬಳಿಕ ಮೂರು ದಿನಗಳ ಕಾಲ ಮನೆಯವರಿಗೆ ಯಾವುದೇ ಅನುಮಾನ ಮೂಡಿರಲಿಲ್ಲ. ಉದಯ್ ತನ್ನ ಕೊಠಡಿಯಲ್ಲೇ ಇರುವನೆಂದು ಭಾವಿಸಿದ್ದ ಕುಟುಂಬಸ್ಥರು ನಂತರ ಮನೆಯ ಮೇಲ್ಭಾಗದಿಂದ ತೀವ್ರ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಅನುಮಾನಗೊಂಡ ಅವರು ಕೊಠಡಿಯ ಬಾಗಿಲು ತೆರೆಯಿಸಿ ಪರಿಶೀಲಿಸಿದಾಗ, ಉದಯ್‌ನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ದೃಶ್ಯ ಕಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಉದಯ್ ಆನ್‌ಲೈನ್ ಗೇಮಿಂಗ್ ಚಟಕ್ಕೆ ಒಳಗಾಗಿದ್ದ ಎನ್ನಲಾಗುತ್ತಿದೆ. ಆದರೆ ಇದೇ ಆತ್ಮಹತ್ಯೆಗೆ ಕಾರಣವೇ ಅಥವಾ ಇನ್ನಾವುದೇ ವೈಯಕ್ತಿಕ, ಮಾನಸಿಕ ಅಥವಾ ಆರ್ಥಿಕ ಸಮಸ್ಯೆಗಳು ಹಿನ್ನೆಲೆಯಲ್ಲಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆತ್ಮಹತ್ಯೆಗೆ ನಿಖರ ಕಾರಣ ತನಿಖೆಯ ನಂತರವೇ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಶವಗಾರಕ್ಕೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ.
ಈ ದುರ್ಘಟನೆ ಮತ್ತೊಮ್ಮೆ ಯುವಜನರಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಆನ್‌ಲೈನ್ ಗೇಮಿಂಗ್ ವ್ಯಸನ ಹಾಗೂ ಜೀವನದ ಸವಾಲುಗಳನ್ನು ಎದುರಿಸುವಲ್ಲಿ ಸೂಕ್ತ ಮಾರ್ಗದರ್ಶನದ ಅಗತ್ಯವನ್ನು ನೆನಪಿಸುವಂತಾಗಿದೆ. ಆತ್ಮಹತ್ಯೆಯ ಹಿಂದಿನ ನಿಖರ ಕಾರಣ ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸ್ ತನಿಖೆಯ ಬಳಿಕವೇ ಬಹಿರಂಗವಾಗುವ ಸಾಧ್ಯತೆಯಿದೆ.
