ಕಸಗುಡಿಸುವಂತೆ ಹೆಡ್ ಮಾಸ್ಟರ್ ಕಿರು*ಳ – ಶಾಲೆಯ 4ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಆತ್ಮ*ತ್ಯೆ

ಬೀದರ್: ಮುಖ್ಯ ಶಿಕ್ಷಕರ ಕಿರುಕುಳದಿಂದ ಮನನೊಂದಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ನಗರದ ಪ್ರತಾಪ್ ನಗರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಜಿಲ್ಲೆಯಾದ್ಯಂತ ಆಘಾತ ಮೂಡಿಸಿದ್ದು, ವಿದ್ಯಾರ್ಥಿಯ ಸಾವಿನ ಸುತ್ತ ಹಲವು ಅನುಮಾನಗಳು ಹಾಗೂ ಆರೋಪಗಳು ಕೇಳಿಬರುತ್ತಿವೆ.

ಮೃತ ವಿದ್ಯಾರ್ಥಿಯನ್ನು ಶಾಂತಿನಗರ ನಿವಾಸಿ ಸಮೀರ್ (15) ಎಂದು ಗುರುತಿಸಲಾಗಿದೆ. ಸಮೀರ್ ಸ್ಥಳೀಯ ಖಾಸಗಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದನು. ಪ್ರಥಮ ತರಗತಿಯಿಂದಲೇ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಮೀರ್ ಓದಿನಲ್ಲಿ ಸಹ ಉತ್ತಮ ವಿದ್ಯಾರ್ಥಿಯಾಗಿದ್ದ ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಸಮೀರ್ ಎಂದಿನಂತೆ ಇಂದು ಬೆಳಗ್ಗೆ ಶಾಲೆಗೆ ತೆರಳಿದ್ದನು. ಶಾಲೆಗೆ ಹೋದ ಕೆಲವೇ ಸಮಯದಲ್ಲಿ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ್ದಾನೆ ಎಂದು ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಘಟನೆಯ ನಂತರ ಶಾಲಾ ಆಡಳಿತ ಮಂಡಳಿಯ ನಡೆ ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿದ್ಯಾರ್ಥಿಯ ಆತ್ಮಹತ್ಯೆ ವಿಷಯವನ್ನು ಪೋಷಕರಿಗೆ ತಕ್ಷಣ ಮಾಹಿತಿ ನೀಡದೇ, ಮೃತದೇಹವನ್ನು ನೇರವಾಗಿ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ತಮ್ಮ ಮಗನ ಸಾವಿನ ಕುರಿತು ಯಾವುದೇ ಮಾಹಿತಿ ನೀಡದೆ ಶವವನ್ನು ಆಸ್ಪತ್ರೆಗೆ ರವಾನಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ಸಮೀರ್‌ನ ಸಾವಿಗೆ ಶಾಲೆಯ ಮುಖ್ಯ ಶಿಕ್ಷಕರ ಕಿರುಕುಳವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಪ್ರಥಮ ತರಗತಿಯಿಂದಲೂ ಇದೇ ಶಾಲೆಯಲ್ಲಿ ಓದುತ್ತಿದ್ದ ಸಮೀರ್ ಮೇಲೆ ಮುಖ್ಯ ಶಿಕ್ಷಕರು ನಿರಂತರ ಒತ್ತಡ ಹೇರುತ್ತಿದ್ದರು ಎಂದು ಪೋಷಕರು ತಿಳಿಸಿದ್ದಾರೆ.

“ಹೆಚ್ಚಿನ ಅಂಕಗಳನ್ನು ತೆಗೆದುಕೊಳ್ಳಬೇಕು ಎಂದು ಪದೇ ಪದೇ ಒತ್ತಡ ಹಾಕುತ್ತಿದ್ದರು. ಜೊತೆಗೆ ಶಾಲೆಯ ಸ್ವಚ್ಛತಾ ಕೆಲಸಗಳನ್ನು ಮಾಡಿಸುವುದು, ಕಸ ಗೂಡಿಸುವಂತಹ ಕೆಲಸಗಳನ್ನು ನೀಡುವುದು ಸೇರಿದಂತೆ ಹಲವು ರೀತಿಯಲ್ಲಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಈ ಕಿರುಕುಳದಿಂದ ಬೇಸತ್ತು ನಮ್ಮ ಮಗ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾನೆ” ಎಂದು ಮೃತ ವಿದ್ಯಾರ್ಥಿಯ ಪೋಷಕರು ಆರೋಪಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಸ್ಪತ್ರೆ ಮತ್ತು ಶಾಲೆಯ ಮುಂದೆ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಆದರೆ ವಿದ್ಯಾರ್ಥಿಯ ಪೋಷಕರು ಮಾಡಿರುವ ಎಲ್ಲ ಆರೋಪಗಳನ್ನು ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. “ನಾವು ವಿದ್ಯಾರ್ಥಿಗೆ ಉತ್ತಮವಾಗಿ ಓದಬೇಕು, ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಬೇಕು ಎಂದು ಮಾತ್ರ ಸಲಹೆ ನೀಡಿದ್ದೇವೆ. ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಕಿರುಕುಳ ನೀಡಿಲ್ಲ. ನಮ್ಮ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದವು” ಎಂದು ಶಾಲಾ ಆಡಳಿತ ಸ್ಪಷ್ಟನೆ ನೀಡಿದೆ.

ಪ್ರಕರಣ ಸಂಬಂಧ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿಯ ಸಾವಿಗೆ ನಿಜವಾದ ಕಾರಣ ಏನು, ಪೋಷಕರು ಮಾಡಿರುವ ಆರೋಪಗಳಲ್ಲಿ ಎಷ್ಟು ಸತ್ಯವಿದೆ, ಶಾಲಾ ಆಡಳಿತ ಮಂಡಳಿಯ ಪಾತ್ರ ಏನು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *