ಬೆಂಗಳೂರು, ಫೆಬ್ರವರಿ 07: ನಗರದ Soladevanahalli ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಕೆಲ ತಿಂಗಳ ಹಿಂದೆ ಫ್ರೀಫೈರ್ ಗೇಮ್ಗೆ ಅಡಿಕ್ಟ್ ಆಗಿದ್ದ ಅಕ್ಕನ ಮಗ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದ ಮಾವ ನಾಗಪ್ರಸಾದ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಬಾಲಕನ ಸಾವಿನ ಆಘಾತದಿಂದ ಮನನೊಂದಿದ್ದ ಕುಟುಂಬಸ್ಥರು ಈ ತೀವ್ರ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಅಳಿಯನ ಸಾವಿನ ಪಾಪ ತೊಳೆಯಲು ‘ಟೆಂಪಲ್ ರನ್’
ಅಮೋಘಕೀರ್ತಿಯನ್ನು ಕೊಂದ ಪಾಪ ಪರಿಹಾರವಾಗಲಿ ಎಂಬ ನಂಬಿಕೆಯಲ್ಲಿ ಇಡೀ ಕುಟುಂಬ ಕಳೆದ ಕೆಲ ತಿಂಗಳಿಂದ ನಿರಂತರವಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇದೇ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಿಹಾರಕ್ಕೆ ಪ್ರವಾಸ ಕೈಗೊಂಡಿದ್ದ ನಾಗಪ್ರಸಾದ್, ಅವರ ತಾಯಿ ಸುಮಂಗಲಾ (78), ಸಹೋದರಿ ಶಿಲ್ಪಾ (48) ಮತ್ತು ಶ್ರುತಾ (43) ನಾಲ್ವರೂ ಒಟ್ಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹಗಳ ಸಮೀಪ ನಿದ್ರಾಮಾತ್ರೆಗಳು ಪತ್ತೆಯಾಗಿದ್ದು, ಮಾತ್ರೆಗಳ ಅತಿಯಾದ ಸೇವನೆಯಿಂದಲೇ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ.
ನಡೆದಿದ್ದೇನು?
ಪೊಲೀಸ್ ದಾಖಲೆಗಳ ಪ್ರಕಾರ, ಬಾಲಕನ ಸಾವಿಗೆ ಸುಮಾರು ಎಂಟು ತಿಂಗಳ ಹಿಂದಿನಿಂದ ಅಮೋಘಕೀರ್ತಿ ಮಾವ ನಾಗಪ್ರಸಾದ್ ಜೊತೆ ವಾಸವಿದ್ದ. ಈ ಅವಧಿಯಲ್ಲಿ ಆತ ಮೊಬೈಲ್ನಲ್ಲಿ ಫ್ರೀಫೈರ್ ಗೇಮ್ಗೆ ತೀವ್ರವಾಗಿ ಅಡಿಕ್ಟ್ ಆಗಿದ್ದ. ಗೇಮ್ ಚಟದ ಪರಿಣಾಮ ಪದೇಪದೇ ಹಣ ಕೇಳುತ್ತಿದ್ದು, ಹಣ ಸಿಗದಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಒಂದು ವಾರದ ಹಿಂದೆ ಹಣ ಕೊಡಿಸುವಂತೆ ಮಾವನ ಮೇಲೆ ಹಲ್ಲೆಗೂ ಮುಂದಾಗಿದ್ದಾನೆ ಎಂಬ ಆರೋಪವೂ ಇದೆ. ಇದರಿಂದ ಬೇಸತ್ತ ನಾಗಪ್ರಸಾದ್, ಅಮೋಘಕೀರ್ತಿಯ ಕತ್ತು ಸೀಳಿ ಕೊಲೆ ಮಾಡಿದ್ದ. ಆ ಬಳಿಕ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಘಟನೆ ಆಗಸ್ಟ್ 8ರಂದು ವರದಿಯಾಗಿತ್ತು.
ಪ್ರಕರಣದ ಮುಂದುವರಿಕೆ
ಘಟನೆಯ ನಂತರ ಹಣದ ಕೊರತೆಯಿಂದ ನಾಗಪ್ರಸಾದ್ ಮೂರು ದಿನಗಳ ಕಾಲ ಮೆಜೆಸ್ಟಿಕ್ ಪ್ರದೇಶದಲ್ಲಿ ತಂಗಿದ್ದನೆಂದು ತಿಳಿದುಬಂದಿದೆ. ಬಳಿಕ ಆತ ಸ್ವಯಂ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಶರಣಾಗಿದ್ದ. ಪೊಲೀಸರು ಪ್ರಕರಣ ದಾಖಲಿಸಿ ನಾಗಪ್ರಸಾದ್ನ್ನು ಜೈಲಿಗೆ ಕಳುಹಿಸಿದ್ದರು. ನಂತರ ಆತನ ತಂಗಿ ಶಿಲ್ಪಾ ಬೇಲ್ ಮೂಲಕ ಅಣ್ಣನನ್ನು ಜೈಲಿನಿಂದ ಹೊರತಂದಿದ್ದಳು. ಜೈಲಿನಿಂದ ಬಿಡುಗಡೆಯಾದ ಬಳಿಕ ಕುಟುಂಬ ಸಮೇತವಾಗಿ ಬಿಹಾರ ಪ್ರವಾಸಕ್ಕೆ ತೆರಳಿದ ನಾಲ್ವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ದುರ್ಘಟನೆಯ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆತ್ಮಹತ್ಯೆಗೆ ಕಾರಣವಾದ ನಿಖರ ಸಂದರ್ಭಗಳು, ಮಾತ್ರೆಗಳ ಮೂಲ ಹಾಗೂ ಇತರ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
