ಅಕ್ರಮ ಸಂಬಂಧಕ್ಕಾಗಿ ಮಗು ಬಲಿ: ₹50,000ಕ್ಕೆ ಮಗುವನ್ನು ಮಾರಿದ ಪಾಪಿ ತಾಯಿ

ಅಕ್ರಮ ಸಂಬಂಧಕ್ಕಾಗಿ ಮಗು ಬಲಿ: ₹50,000ಕ್ಕೆ ಮಗುವನ್ನು ಮಾರಿದ ಪಾಪಿ ತಾಯಿ

ಚಿತ್ರದುರ್ಗ: ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಮಾತಿದೆ. ಆದರೆ ಈ ಮಾತಿಗೆ ತದ್ವಿರುದ್ಧವಾಗಿ, ತಾಯಿಯೇ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿತೆಂದು ಎರಡು ವರ್ಷದ ಮುದ್ದು ಮಗುವನ್ನೇ ಹಣಕ್ಕಾಗಿ ಮಾರಾಟ ಮಾಡಿದ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಮಾನವೀಯ ಮೌಲ್ಯಗಳನ್ನು ನಡುಗಿಸುವಂತಿದ್ದು, ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟುಮಾಡಿದೆ.

ಕೆಲವು ದಿನಗಳಿಂದ ಒಂದು ಪುಟ್ಟ ಮಗು ಕಾಣೆಯಾಗಿರುವುದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅನುಮಾನಗೊಂಡು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಚಿತ್ರದುರ್ಗ ಜಿಲ್ಲಾ ಬಾಲಭವನ ಅಧಿಕಾರಿ ಮಂಜುನಾಥ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಪರಿಶೀಲನೆಯ ವೇಳೆ, ಪ್ರಕರಣದ ಭೀಕರ ಸತ್ಯ ಬಹಿರಂಗವಾಗಿದೆ.

ಹಿರಿಯೂರು ತಾಲೂಕಿನ ಹುಳಿಯಾರು ರಸ್ತೆಯ ನಿವಾಸಿಯಾಗಿರುವ ಐಶ್ವರ್ಯ ಎಂಬ ಮಹಿಳೆ ತನ್ನ ಎರಡು ವರ್ಷದ ಮಗುವನ್ನು ಕಾಣೆಯಾದಂತೆ ತೋರಿಸಿ, ವಾಸ್ತವದಲ್ಲಿ ಮಗುವನ್ನೇ ಮಾರಾಟ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಸಂಬಂಧ ಡಿಸೆಂಬರ್ 23ರಂದು ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತನಿಖೆಯ ವೇಳೆ ಇನ್ನಷ್ಟು ಬೆಚ್ಚಿಬೀಳಿಸುವ ಸಂಗತಿಗಳು ಹೊರಬಿದ್ದಿವೆ. ಐಶ್ವರ್ಯಳು ಹೂವಿನಹೊಳೆ ಗ್ರಾಮದ ಚಂದ್ರಪ್ಪ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕೆ, ಇಬ್ಬರೂ ಸೇರಿ ಮಗುವನ್ನು ಮಾರಾಟ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅದರಂತೆ, ಕೊಪ್ಪಳ ಜಿಲ್ಲೆಯ ಮೂಲದ ಕೆಲವರಿಗೆ ಈ ಪುಟ್ಟ ಮಗುವನ್ನು ಸುಮಾರು 50,000 ರೂಪಾಯಿಗೆ ಮಾರಾಟ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಈ ದುಷ್ಕೃತ್ಯ ಡಿಸೆಂಬರ್ 19ರಂದು ನಡೆದಿದ್ದು, ಪ್ರಕರಣ ಬೆಳಕಿಗೆ ಬಂದ ನಂತರ ಹಿರಿಯೂರು ನಗರ ಠಾಣೆ ಪೊಲೀಸರು ಆರೋಪಿ ಐಶ್ವರ್ಯಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಹಾಗೂ ಐಶ್ವರ್ಯಳ ಪ್ರಿಯಕರನಾದ ಚಂದ್ರಪ್ಪ ಈವರೆಗೆ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.

ಇದಲ್ಲದೆ, ಮಗುವನ್ನು ಖರೀದಿಸಿರುವ ಆರೋಪಿಗಳನ್ನೂ ಪತ್ತೆಹಚ್ಚಲು ಪೊಲೀಸ್ ತಂಡಗಳು ವಿವಿಧ ಜಿಲ್ಲೆಗಳಲ್ಲಿ ತನಿಖೆ ಮುಂದುವರೆಸುತ್ತಿವೆ. ಘಟನೆಗೆ ಸಂಬಂಧಿಸಿದಂತೆ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳ ಮಾರಾಟ ಜಾಲದ ಹಿಂದಿರುವ ಸಂಪೂರ್ಣ ಸತ್ಯವನ್ನು ಹೊರತೆಗೆಯಲು ಪೊಲೀಸರು ಮುಂದಾಗಿದ್ದಾರೆ.

ಈ ಘಟನೆ ತಾಯಿತನದ ಪಾವಿತ್ರ್ಯವನ್ನೇ ಪ್ರಶ್ನಿಸುವಂತಿದ್ದು, ಇಂತಹ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯ ಸ್ಥಳೀಯರಲ್ಲಿ ಹೆಚ್ಚಾಗಿದೆ.

Spread the love

Leave a Reply

Your email address will not be published. Required fields are marked *