ಬೆಂಗಳೂರು: ವಂದೇ ಭಾರತ್ ರೈಲು ಡಿಕ್ಕಿ ಹೊಡೆದು ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ದಾರುಣ ಘಟನೆ ನಗರ ಹೊರವಲಯದ ಚಿಕ್ಕಬಾಣಾವರ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಘಟನೆಯಿಂದ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿದ್ದು, ವಿದ್ಯಾರ್ಥಿ ಸಮುದಾಯದಲ್ಲೂ ದುಃಖದ ಛಾಯೆ ಮೂಡಿದೆ.
ಮೃತರಾದವರು ಕೇರಳ ಮೂಲದ ಸ್ಟೇರ್ಲಿನ್ ಎಲ್ಲಾ ಶಾಜಿ (19) ಹಾಗೂ ಜಸ್ಟಿನ್ ಜೋಸೆಫ್ (20). ಇಬ್ಬರೂ ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ನರ್ಸಿಂಗ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ನರ್ಸಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಸಮೀಪದ ವಸತಿಯಲ್ಲೇ ಇಬ್ಬರು ವಾಸವಾಗಿದ್ದು, ಭಾನುವಾರ ಮಧ್ಯಾಹ್ನ ಸುಮಾರು 2.30ರ ವೇಳೆಗೆ ಚಿಕ್ಕಬಾಣಾವರ ರೈಲ್ವೇ ಸ್ಟೇಷನ್‌ಗೆ ಬಂದಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಇದೇ ಸಮಯದಲ್ಲಿ ಬೆಂಗಳೂರಿನಿಂದ ಬೆಳಗಾವಿ ಮಾರ್ಗಕ್ಕೆ ತೆರಳುತ್ತಿದ್ದ ವಂದೇ ಭಾರತ್ ರೈಲು ವೇಗವಾಗಿ ನಿಲ್ದಾಣದ ಮೂಲಕ ಹಾದುಹೋಗುತ್ತಿದ್ದಾಗ, ಇಬ್ಬರೂ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕವಾಗಿ ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಭವಿಸಿದ ತಕ್ಷಣ ಸ್ಟೇಷನ್ ಸಿಬ್ಬಂದಿ ಮತ್ತು ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದ್ದು, ಶವಗಳನ್ನು ಸಂಗ್ರಹಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇಬ್ಬರೂ ವಿದ್ಯಾರ್ಥಿಗಳು ರೈಲ್ವೆ ಹಳಿಗೆ ಏಕೆ ಹತ್ತಿರ ಹೋಗಿದ್ದಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ರೈಲು ಆಕಸ್ಮಿಕವಾಗಿ ಬಂದು ಡಿಕ್ಕಿಯಾಗಿದೆಯೇ?, ಅಥವಾ ಇಬ್ಬರೂ ಯಾವದೋ ಕಾರಣಕ್ಕೆ ಹಳಿಯತ್ತ ಹೋಗಿದ್ದಾರೆಯೇ?, ಅಥವಾ ಇದು ಆಕಸ್ಮಿಕವೋ ಆತ್ಮಹತ್ಯೆಯೋ? ಎಂಬ ಕೋಣೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಹತ್ತಿರದ ಸಿಸಿಟಿವಿ ದೃಶ್ಯಗಳು, ಸಾಕ್ಷಿದಾರರ ಹೇಳಿಕೆಗಳು ಹಾಗೂ ಕಾಲೇಜು ಸ್ನೇಹಿತರ ಮಾಹಿತಿ ಆಧರಿಸಿ ತನಿಖೆ ನಡೆಯುತ್ತಿದೆ.
ಈ ಸಂಬಂಧ ರೈಲ್ವೆ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರು ರೈಲ್ವೆ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಣೆಗಾಗಿ ವಿಶೇಷ ತಂಡ ರಚಿಸಿದೆ. ವಿದ್ಯಾರ್ಥಿಗಳ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲು ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ.
