ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿರುವ ಬೀದಿ ನಾಯಿಯ ಮೇಲಿನ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವ್ಯಾಪಕ ಹುಡುಕಾಟ ನಡೆಸಿ, ಸುಮಾರು 25ಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಆರೋಪಕ್ಕೆ ಒಳಪಟ್ಟಿದ್ದ ನಾಯಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವರಾಗಿದ್ದಾರೆ.
ಅಕ್ಟೋಬರ್ 15ರಂದು ಬೆಳ್ಳಂದೂರು ಸಮೀಪದ ಸರ್ಜಾಪುರ ರಸ್ತೆಯ ಕೊಡತಿ ಗ್ರಾಮದಲ್ಲಿ ಬೀದಿ ನಾಯಿಗಳಿಗೆ ನಿಯಮಿತವಾಗಿ ಆಹಾರ ನೀಡುತ್ತಿದ್ದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಅವರ ಹೇಳಿಕೆಯಂತೆ, ನಾಲ್ವರು ಯುವಕರು ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬ ಗಂಭೀರ ಆರೋಪ ಮಾಡಲಾಗಿತ್ತು.
ಈ ದೂರು ಸ್ವೀಕರಿಸಿದ ನಂತರ ಪೊಲೀಸರು ಹಲವು ದಿನಗಳ ಕಾಲ ಕೊಡತಿ ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಸಿಸಿಟಿವಿಗಳು, ಮನೆ—ಮನೆಗಳ ಡೋರ್‌ಕ್ಯಾಮ್‌ಗಳು ಮತ್ತು ವ್ಯಾಪಾರದ ಸಂಸ್ಥೆಗಳ ಕ್ಯಾಮೆರಾಗಳನ್ನೂ ಪರಿಶೀಲಿಸಿದರು. ಕೊನೆಗೂ ಸಿಸಿಟಿವಿ ಚಲನಚಿತ್ರಗಳ ಆಧಾರದ ಮೇಲೆ ಆ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಒಳಪಟ್ಟಿದ್ದ ಬೀದಿ ನಾಯಿಯನ್ನು ಗುರುತಿಸಿ, ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ನಂತರ, ಕಾನೂನು ಪ್ರಕ್ರಿಯೆಯಂತೆ ನಾಯಿಯ ವೆಜೈನಲ್ ಸ್ವಾಬ್ ಸಂಗ್ರಹಿಸಿ, ಅದರ ವೈದ್ಯಕೀಯ ಪರೀಕ್ಷೆಗಾಗಿ ವೈಜ್ಞಾನಿಕ ಪರಿಶೋಧನಾ ಪ್ರಯೋಗಾಲಯ (FSL) ಗೆ ಕಳುಹಿಸಲಾಗಿದೆ. ಮೊದಲಿಗೆ ನಿಜವಾಗಿಯೂ ಅತ್ಯಾಚಾರ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು FSL ವರದಿ ಸ್ಪಷ್ಟಪಡಿಸಲಿದೆ.
FSL ವರದಿ ಬಂದ ನಂತರ ಮಾತ್ರ ಪೊಲೀಸರು ಮುಂದಿನ ಹಂತವಾಗಿ, ಆರೋಪಿಗಳ ಪತ್ತೆ ಮತ್ತು ಬಂಧನಕ್ಕಾಗಿ ತೀವ್ರ ತನಿಖೆಗೆ ಮುಂದಾಗಲಿದ್ದಾರೆ. ಆರಂಭಿಕ ದೂರು ವರ್ತೂರು ಠಾಣೆಯಲ್ಲಿ ದಾಖಲಾಗಿದ್ದರೂ, ಸ್ಥಳೀಯ ವ್ಯಾಪ್ತಿ ಪರಿಶೀಲನೆಯ ಬಳಿಕ ಪ್ರಕರಣವನ್ನು ಬೆಳ್ಳಂದೂರು ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು, ಈಗ ಅಲ್ಲಿ ತನಿಖೆ ಮುಂದುವರಿಯುತ್ತಿದೆ.
ಈ ಘಟನೆ ಬೆಂಗಳೂರಿನಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.
