ಹಾಸನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ: ಎಡಗಾಲಿನ ಬದಲು ಬಲಗಾಲಿಗೆ ಶಸ್ತ್ರಚಿಕಿತ್ಸೆ
ಹಾಸನ, ಸೆಪ್ಟೆಂಬರ್ 23: ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನಿರ್ಲಕ್ಷ್ಯ, ಅಸಡ್ಡೆ ಹಾಗೂ ತಪ್ಪು ನಿರ್ಣಯಗಳಿಂದಾಗಿ ರೋಗಿಗಳು ಕಷ್ಟ ಅನುಭವಿಸುತ್ತಿರುವ ಘಟನೆಗಳು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಇಂತಹ ವೈದ್ಯರ ಎಡವಟ್ಟುಗಳ ಬಗ್ಗೆ ಸುದ್ದಿ ಕೇಳುವುದು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಹಾಸನದಲ್ಲೂ ಇದೇ ರೀತಿಯ ಗಂಭೀರ ಘಟನೆ ನಡೆದಿದ್ದು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯನೊಬ್ಬ ತನ್ನ ನಿರ್ಲಕ್ಷ್ಯದಿಂದ ರೋಗಿಯ ಶರೀರದ ತಪ್ಪು ಭಾಗಕ್ಕೆ ಶಸ್ತ್ರಚಿಕಿತ್ಸೆ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.
ಪ್ರಕರಣದ ವಿವರ ಹೀಗಿದೆ: ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಜ್ಯೋತಿ ಎಂಬ ಮಹಿಳೆಯ ಎಡಗಾಲಿಗೆ ಗಂಭೀರ ಗಾಯವಾಗಿತ್ತು. ಆ ಸಮಯದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಎಡಗಾಲಿನಲ್ಲಿ ಲೋಹದ ರಾಡ್ ಅಳವಡಿಸಲಾಗಿತ್ತು. ಇತ್ತೀಚೆಗೆ, ಆ ರಾಡ್ ಕಾರಣದಿಂದಾಗಿ ಎಡಗಾಲಿನಲ್ಲಿ ನಿರಂತರ ನೋವು ಕಾಣಿಸಿಕೊಂಡಿತು. ಇದರಿಂದಾಗಿ ಜ್ಯೋತಿ ಅವರು ನೋವು ನಿವಾರಣೆಗಾಗಿ ಮತ್ತು ರಾಡ್ ತೆಗೆಯಲು ಹಾಸನ ಜಿಲ್ಲಾಸ್ಪತ್ರೆಗೆ ಬಂದಿದ್ದರು
ಆದರೆ ಆಸ್ಪತ್ರೆಯ ವೈದ್ಯ ಸಂತೋಷ್ ಅವರು ಎಡಗಾಲಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿರುವ ಬದಲು, ತಪ್ಪಾಗಿ ಬಲಗಾಲಿಗೆ ಶಸ್ತ್ರಚಿಕಿತ್ಸೆ ನಡೆಸಿದರು. ಈ ಮೂಲಕ, ಸಮಸ್ಯೆ ಇಲ್ಲದ ಬಲಗಾಲನ್ನು ಅನಾವಶ್ಯಕವಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಮಹತ್ತರ ಎಡವಟ್ಟನ್ನು ಮಾಡಿದ್ದಾರೆ. ನಂತರ ತಪ್ಪಿನ ಅರಿವಾದ ವೈದ್ಯರು ತಕ್ಷಣವೇ ನಿಜವಾದ ಸಮಸ್ಯೆಯಿದ್ದ ಎಡಗಾಲಿನ ರಾಡ್ ತೆಗೆದುಹಾಕಿದರು.
ಈ ಘಟನೆ ಜ್ಯೋತಿ ಅವರ ಕುಟುಂಬಕ್ಕೆ ಭಾರೀ ಆಘಾತ ತಂದಿದೆ. ವೈದ್ಯರ ಈ ನಿರ್ಲಕ್ಷ್ಯದಿಂದ ಅನಗತ್ಯ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಯ ಕುಟುಂಬ ಕೋಪಗೊಂಡಿದ್ದು, ಜಿಲ್ಲಾಸ್ಪತ್ರೆಯ ವಿರುದ್ಧ ಗಂಭೀರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಅಜಾಗರೂಕತೆಗಳಿಂದ ರೋಗಿಗಳು ಇನ್ನಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂಬುದನ್ನು ಮತ್ತೆ ಒಮ್ಮೆ ಸ್ಪಷ್ಟಪಡಿಸುವ ಈ ಘಟನೆ, ರಾಜ್ಯವ್ಯಾಪಿ ಆರೋಗ್ಯ ಸೇವೆಗಳ ಗುಣಮಟ್ಟದ ಕುರಿತು ಪ್ರಶ್ನೆಗಳನ್ನು ಎಬ್ಬಿಸಿದೆ.
ಸ್ಥಳೀಯರು ಹಾಗೂ ರೋಗಿಯ ಬಂಧುಗಳು ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಹಾಗೂ ಆರೋಗ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.