ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಬಿಕ್ಲು ಶಿವ ಕೊಲೆ ಪ್ರಕರಣವು ನಗರದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಕೊಲೆ ತೇಟ ಸಿನೆಮಿಯಲ್ಲಿನ ದೃಶ್ಯಗಳಂತೆ ಯೋಜಿತವಾಗಿ, ನಿರ್ದಯವಾಗಿ ನಡೆದಿದ್ದು, ನಗರದ ಅಪರಾಧ ಇತಿಹಾಸದಲ್ಲೇ ಪ್ರಮುಖ ಘಟನೆಯಾಗಿ ಪರಿಣಮಿಸಿತು. ಈ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರ ಹೆಸರು ತನಿಖೆಯ ಹಂತದಲ್ಲೇ ತಳಕು ಹಾಕಿಕೊಂಡಿದ್ದು, ಅವರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದವು. ಆರೋಪಗಳ ಪ್ರಕಾರ, ಕೊಲೆ ಪ್ರಕರಣದಲ್ಲಿ ಶಾಸಕರ ನೇರ ಅಥವಾ ಪರೋಕ್ಷ ಬೆಂಬಲವಿದೆ ಎಂಬ ಶಂಕೆಗಳು ವ್ಯಕ್ತವಾದವು.
ಇತ್ತೀಚೆಗೆ, ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಭೈರತಿ ಬಸವರಾಜ್ ಅವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ರಿಲೀಫ್ ನೀಡಿದೆ. ನ್ಯಾ. ಎಂ.ಐ. ಅರುಣ್ ಅವರ ನೇತೃತ್ವದ ಹೈಕೋರ್ಟ್ ಪೀಠವು, ತನಿಖೆ ನಡೆಯುತ್ತಿರುವ ಅವಧಿಯಲ್ಲಿ ಶಾಸಕರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸ್ಪಷ್ಟ ಆದೇಶ ನೀಡಿದೆ. ಜೊತೆಗೆ, ಪ್ರಕರಣದ ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕೆಂದು ಶಾಸಕರಿಗೆ ಸೂಚನೆ ನೀಡಲಾಗಿದೆ. ಈ ಪ್ರಕರಣವನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂಬ ಬೇಡಿಕೆಯನ್ನು ಒಳಗೊಂಡ ಅರ್ಜಿಯನ್ನು ಭೈರತಿ ಬಸವರಾಜ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅವರ ಪರ ವಕೀಲರು, ಶಾಸಕರು ಈವರೆಗೆ ವಿಚಾರಣೆಗೆ ಅಗತ್ಯವಾದ ಸಹಕಾರವನ್ನು ನೀಡಿರುವುದಾಗಿ, ಹಲವು ಬಾರಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿರುವುದಾಗಿ ವಾದಿಸಿದರು.
ಪ್ರಕರಣದ ಹಿನ್ನೆಲೆಯನ್ನು ಪರಿಶೀಲಿಸಿದರೆ, ಜುಲೈ 15ರ ರಾತ್ರಿ 8.30 ಗಂಟೆ ಸುಮಾರಿಗೆ, ಬಿಕ್ಲು ಶಿವ ಅವರು ತಮ್ಮ ಮನೆಯಿಂದ ಹೊರಬಂದು ಪುಟ್‌ಪಾತ್ ಮೇಲೆ ನಿಂತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಅವರ ಮನೆಯಿಂದ ದೂರವಿಲ್ಲದ ಸ್ಥಳದಲ್ಲಿ, ಸ್ಕಾರ್ಪಿಯೋ ಕಾರಿನಲ್ಲಿ ಕಾದು ಕುಳಿತಿದ್ದ 7 ರಿಂದ 8 ಮಂದಿ ಆರೋಪಿಗಳು, ಏಕಾಏಕಿ ಅವರ ಮೇಲೆ ದಾಳಿ ನಡೆಸಿದರು. ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ನೀಡದಂತೆ ಬಿಕ್ಲು ಶಿವ ಅವರನ್ನು ಸುತ್ತುವರಿದು, ನಿರ್ದಯವಾಗಿ ಹಲ್ಲೆ ನಡೆಸಿದರು. ಕೊನೆಗೆ, ರಸ್ತೆಯಲ್ಲಿ ನಿಂತಿದ್ದ ಕಾರುಗಳ ನಡುವೆ ಸಿಲುಕಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಅವರ ಪ್ರಾಣವನ್ನು ಕಸಿದುಕೊಂಡರು.
ತನಿಖೆಯ ಪ್ರಾಥಮಿಕ ಹಂತದಲ್ಲೇ, ಕೊಲೆಯ ಹಿಂದೆ ವೈಯಕ್ತಿಕ ವೈಮನಸ್ಸು ಹಾಗೂ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರಣಗಳು ಪ್ರಮುಖ ಎಂದು ಪೊಲೀಸರು ಪತ್ತೆಹಚ್ಚಿದರು. ಕೊಲೆಗೆ ಸುಪಾರಿ ಪಡೆದಿದ್ದ ಗ್ಯಾಂಗ್‌ನ ಕೆಲ ಸದಸ್ಯರನ್ನು ಪೊಲೀಸರು ಬಂಧಿಸಿದರು. ತನಿಖೆಯಲ್ಲಿ, ಭೈರತಿ ಸುರೇಶ್ ಈ ಕೊಲೆಗೆ ಬೆಂಬಲ ನೀಡಿದ್ದಾರೆ ಎಂಬ ಆರೋಪಗಳು ಹೊರಬಂದವು. ಈ ಮಾಹಿತಿಯ ಆಧಾರದ ಮೇಲೆ, ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಜಗದೀಶ್, ವಿಮಲ್, ಕಿರಣ್, ಅನಿಲ್ ಸೇರಿದಂತೆ ಶಾಸಕ ಭೈರತಿ ಬಸವರಾಜ್ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಯಿತು.
ಪ್ರಕರಣದ ಗಂಭೀರತೆ ಹಾಗೂ ಆರೋಪಿಗಳ ರಾಜಕೀಯ ಸಂಪರ್ಕವನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ಜುಲೈ 24ರಂದು ಪ್ರಕರಣವನ್ನು ಸಿಐಡಿಗೆ ವಹಿಸಲು ಆದೇಶ ಹೊರಡಿಸಿತು. ಸಿಐಡಿ ತನಿಖೆಯಡಿ ಇನ್ನಷ್ಟು ವಿವರಗಳು ಬಹಿರಂಗಗೊಳ್ಳುವ ನಿರೀಕ್ಷೆಯಿದೆ. ಆದರೆ, ಹೈಕೋರ್ಟ್ ನೀಡಿದ ಈ ಮಧ್ಯಂತರ ರಿಲೀಫ್ ಮೂಲಕ, ಭೈರತಿ ಬಸವರಾಜ್ ತಾತ್ಕಾಲಿಕವಾಗಿ ಬಂಧನದ ಭೀತಿಯಿಂದ ಮುಕ್ತಿ ಪಡೆದಿದ್ದು, ಮುಂದಿನ ಹಂತದಲ್ಲಿ ತನಿಖಾ ಪ್ರಗತಿ ಹಾಗೂ ನ್ಯಾಯಾಲಯದ ತೀರ್ಪು ಪ್ರಕರಣದ ಭವಿಷ್ಯವನ್ನು ನಿರ್ಧರಿಸಲಿದೆ.