ದೊಡ್ಡಬಳ್ಳಾಪುರ: ಚಾಲನೆಯಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಟೈರ್ ಸ್ಪೋಟಗೊಂಡು, ನಿಯಂತ್ರಣ ತಪ್ಪಿದ ಬಸ್ ರಸ್ತೆಯ ತಡೆಗೋಡೆಗೆ ಗುದ್ದಿದೆ. ಆ ಕ್ಷಣದಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ 30ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಮೆಣಸಿಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಈ ಘಟನೆ ನಡೆದಿದೆ. ಸೂಲಿಕುಂಟೆ-ದೊಡ್ಡಬಳ್ಳಾಪುರ ಮಾರ್ಗದ ಬಸ್ ದೊಡ್ಡಬಳ್ಳಾಪುರ ನಗರಕ್ಕೆ ಬರುವ ವೇಳೆ ಬಸ್ಸಿನ ಟೈರ್ ಸ್ಪೋಟಗೊಂಡಿದೆ. ಈ ವೇಳೆ ಚಾಲಕ ಮುನಿಶ್ಯಾಮಪ್ಪ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿ ಇದ್ದ 30ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿಸಿಸಿದ್ದಾರೆ.
ಬಸ್ಸಿನ ಟೈರ್ ರೀಬಿಲ್ಟ್ ಆಗಿದ್ದು, ಟೈರ್ ಸ್ಪೋಟಕ್ಕೆ ಇದು ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಟೈರ್ ಸ್ಪೋಟಗೊಂಡ ತಕ್ಷಣವೇ ಚಾಲಕ ಬಸ್ಸನ್ನು ತಡೆಗೋಡೆಯ ಕಡೆ ಚಲಿಸಿದ್ದು, ತಡೆಗೋಡೆಯಿಗೆ ಬಸ್ ಗುದ್ದಿ ನಂತರ ನಿಯಂತ್ರಣಕ್ಕೆ ಬಂದಿದೆ. ಒಂದು ವೇಳೆ ತಡೆಗೋಡೆ ಇಲ್ಲದಿದ್ದರೆ ಬಸ್ ಹಳ್ಳಕ್ಕೆ ಬೀಳುವ ಸಾಧ್ಯತೆ ಇತ್ತು, ಅಲ್ಲಿ ಪ್ರಯಾಣಿಕರ ಪ್ರಾಣ ಹಾನಿಯಾಗುವ ಸಾಧ್ಯತೆಯಿತ್ತು.
ಚಾಲಕನ ಸಮಯ ಪ್ರಜ್ಞೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.