ಸಾಲದ ವಿಚಾರಕ್ಕೆ ನಡೆದ ಗಲಾಟೆಗೆ ಮಹಿಳೆ ಅತ್ಯಾಚಾರದ ಕಥೆಕಟ್ಟಿದ್ದ ಘಟನೆಯೊಂದು ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದಲ್ಲಿ ನಡೆದಿದೆ. ಮಹಿಳೆ ಸೃಷ್ಟಿಸಿದ ಹೈಡ್ರಾಮಾದಿಂದ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಆ ಮೂಲಕ ಬ್ಯಾಡಗಿ ಠಾಣೆ ಪೊಲೀಸರು ನಿರಾಳರಾಗಿದ್ದಾರೆ.
ಹಾವೇರಿ, ಏಪ್ರಿಲ್ 17: ಸಾಲದ ವಿಚಾರಕ್ಕೆ ನಡೆದ ಗಲಾಟೆಗೆ ಓರ್ವ ಮಹಿಳೆ (woman) ಅತ್ಯಾಚಾರದ ಕಥೆಕಟ್ಟಿ ಹೈಡ್ರಾಮಾ ಸೃಷ್ಟಿಸಿದ್ದ ಘಟನೆ ಜಿಲ್ಲೆಯ ಬ್ಯಾಡಗಿ (Byadagi) ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದಲ್ಲಿ ನಡೆದಿದೆ. ಬೆಳ್ಳಂಬೆಳಗ್ಗೆ ಪೊಲೀಸರ ಬಳಿ ಬಂದಿದ್ದ ಗಾಯಗೊಂಡಿದ್ದ ಮಹಿಳೆ ಫೀರಾಂಬಿ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಆರೋಪಿಸಿದ್ದರು. ಆದರೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅದು ಸುಳ್ಳು ಎಂಬುದು ಪತ್ತೆ ಆಗಿದೆ.ಬ್ಯಾಡಗಿ ಪಟ್ಟಣದ ಬೆಟ್ಟದ ಮಲ್ಲೇಶ್ವರ ನಗರದ ನಿವಾಸಿ ಫೀರಾಂಬಿ, ಅತ್ಯಾಚಾರದ ಕಥೆಕಟ್ಟಿ ಪೊಲೀಸರಿಗೆ ಟೆನ್ಷನ್ ಕೊಟ್ಟಿದ್ದರು. ತನ್ನ ಮೇಲೆ ಸಾಮೂಹಿಕ ಅತ್ಯಾಚಾರವಾಗಿದೆ ಎಂದು ಆರೋಪಿಸಿದ್ದರು. ಅವರ ಮುಖ, ಕುತ್ತಿಗೆ ಭಾಗದಲ್ಲಿ ಆಗಿದ್ದ ಗಾಯವನ್ನು ಕಂಡ ಪೊಲೀಸರು, ಫೀರಾಂಬಿ ಹೇಳಿಕೆಯಂತೆ ತನಿಖೆ ಆರಂಭಿಸಿದ್ದರು.
ಬಳಿಕ ಮಹಿಳೆಯನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ ಪೊಲೀಸರು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಇದೇ ವೇಳೆ ಮಾಧ್ಯಮಗಳ ಬಳಿಯೂ ತನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಫೀರಾಂಬಿ ಹೇಳಿದ್ದಾರೆ. ಆದರೆ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಹಿಳೆಯ ಕಳ್ಳಾಟ ಬಯಲಾಗಿದೆ.
ವಿಚಾರಣೆ ವೇಳೆ ಫೀರಾಂಬಿ, ಯಾವುದೇ ಗ್ಯಾಂಗ್ರೇಪ್ ಆಗಿಲ್ಲ ಎಂದು ಹೇಳಿದ್ದಾರೆ. ಸಾಲದ ವಿಚಾರಕ್ಕೆ ಗಲಾಟೆ ಆಗಿ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು. ಹೀಗಾಗಿ ನಾನು ಅತ್ಯಾಚಾರ ಆಗಿದೆ ಎಂದು ಕಥೆ ಕಟ್ಟಿದ್ದಾಗಿ ಹೇಳಿದ್ದಾರೆ. ಸದ್ಯ ಮಹಿಳೆ ಸತ್ಯ ಬಾಯ್ಬಿಟ್ಟ ಕಾರಣ ಬ್ಯಾಡಗಿ ಠಾಣೆ ಪೊಲೀಸರು ನಿರಾಳರಾಗಿದ್ದಾರೆ.
ಬಸ್ ಹತ್ತುವ ವಿಚಾರದಲ್ಲಿ ಮೂವರು ಪ್ರಯಾಣಿಕರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಘಟನೆ ನಿನ್ನೆ ಗದಗ ಜಿಲ್ಲೆಯ ಮುಂಡರಗಿ ನಿಲ್ದಾಣದಲ್ಲಿ ನಡೆದಿತ್ತು. ಮುಂಡರಗಿಯಿಂದ ಹಿರೇವಡ್ಡಟ್ಟಿಗೆ ಹೊರಟ್ಟಿದ್ದ ಬಸ್ನಲ್ಲಿ ಘಟನೆ ನಡೆದಿದೆ. ಸಾರಿಗೆ ಇಲಾಖೆ ಬಸ್ ಕಂಡಕ್ಟರ್ ಶರಣಪ್ಪ ಬಿದರಹಳ್ಳಿ ಎಂಬಾತನ ಮೇಲೆ ಮೂವರು ಪ್ರಯಾಣಿಕರು ಹಲ್ಲೆ ಮಾಡಿದ್ದರು.
ಕಂಡಕ್ಟರ್ನ ಕೈಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಮುಂಡರಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಬಸ್ ಹತ್ತಿ ಮುಂದೆಕ್ಕೆ ಬನ್ನಿ ಎಂದಿದ್ದಕ್ಕೆ ಗಲಾಟೆ ಮಾಡಿದ ಮೂವರು ಪ್ರಯಾಣಿಕರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದರು. ಮುಂಡರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.