ಪತಿಯನ್ನು ಕೊ*ಮಾಡಿ ಹೊಟ್ಟೆ ಸೀಳಿದ ಪತ್ನಿ: ಸಿಕ್ಕಿಬೀಳುವ ಭಯದಲ್ಲಿ ಕಟ್ಟಡದಿಂದ ಜಿಗಿತ

ಕುರುಕ್ಷೇತ್ರ: ಹರಿಯಾಣದ ಕುರುಕ್ಷೇತ್ರದಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಒಂದು ಅತ್ಯಂತ ಭೀಕರ ಕೊಲೆ ಪ್ರಕರಣವು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಂದು, ಬಳಿಕ ಆತನ ಹೊಟ್ಟೆಯನ್ನು ಸೀಳಿ ಕರುಳನ್ನು ಹೊರತೆಗೆದು ಚೀಲದಲ್ಲಿ ತುಂಬುತ್ತಿದ್ದ ವೇಳೆ ಮನೆ ಮಾಲೀಕನಿಗೆ ಸಿಕ್ಕಿಬಿದ್ದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕೊಲೆಯ ಹಿಂದಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಕುರುಕ್ಷೇತ್ರದ ಪೆಹೋವಾ ರಸ್ತೆಯಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಉತ್ತರ ಪ್ರದೇಶ ಮೂಲದ ರಾಜೇಶ್ ಮತ್ತು ಆತನ ಪತ್ನಿ ವಿಮಲಾ ದೇವಿ ಇಲ್ಲಿ ವಾಸವಾಗಿದ್ದರು. ದಂಪತಿಗೆ ಹಲವು ವರ್ಷಗಳಿಂದ ಮಕ್ಕಳಿರಲಿಲ್ಲ ಎನ್ನಲಾಗಿದೆ.

ಮಾಲೀಕನನ್ನು ಕಂಡು ಟೆರೇಸ್‌ನಿಂದ ಜಿಗಿದ ಆರೋಪಿ

ಘಟನೆ ನಡೆದ ವೇಳೆ ಮನೆಯೊಳಗಿಂದ ಗಲಾಟೆಯ ಸದ್ದು ಕೇಳಿಬಂದ ಹಿನ್ನೆಲೆ ಮನೆ ಮಾಲೀಕ ರಿಂಕು ಟೆರೇಸ್‌ಗೆ ತೆರಳಿದ್ದರು. ಅಲ್ಲಿ ಕಂಡ ದೃಶ್ಯದಿಂದ ಅವರು ಬೆಚ್ಚಿಬಿದ್ದಿದ್ದಾರೆ ಎನ್ನಲಾಗಿದೆ. ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ವಿಮಲಾ ದೇವಿ ಮೃತದೇಹದೊಂದಿಗೆ ಇದ್ದಳು ಎಂದು ವರದಿಯಾಗಿದೆ.

ಮನೆ ಮಾಲೀಕ ತನ್ನನ್ನು ನೋಡಿರುವುದನ್ನು ಗಮನಿಸಿದ ಆರೋಪಿ ಮಹಿಳೆ ಭಯಗೊಂಡು ಟೆರೇಸ್‌ನಿಂದ ಕೆಳಗೆ ಜಿಗಿದಿದ್ದಾಳೆ ಎನ್ನಲಾಗಿದೆ. ಇದರಿಂದ ಆಕೆಗೆ ಗಾಯಗಳಾಗಿದ್ದು, ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಪೊಲೀಸರು ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ
ರಾಜೇಶ್‌ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಬಳಿಕ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಹರಿತವಾದ ಆಯುಧದಿಂದ ಆತನ ಹೊಟ್ಟೆಯ ಭಾಗವನ್ನು ಸುಮಾರು 35 ಸೆಂಟಿಮೀಟರ್‌ಗಳಷ್ಟು ಸೀಳಲಾಗಿತ್ತು ಎಂದು ವರದಿಯಾಗಿದೆ. ಕರುಳಿನ ಭಾಗವನ್ನು ಹೊರತೆಗೆದಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ.

ಇದರ ಜೊತೆಗೆ ರಾಜೇಶ್‌ನ ಯಕೃತ್ತಿನ ಬಹುಪಾಲು ಭಾಗ ಹಾಗೂ ಬಲ ಮೂತ್ರಪಿಂಡ ಕಾಣೆಯಾಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಗಮನಕ್ಕೆ ಬಂದಿದೆ. ದೇಹದ ಅಂಗಗಳು ಹೇಗೆ ಕಾಣೆಯಾಗಿವೆ ಮತ್ತು ಅವುಗಳನ್ನು ಏಕೆ ತೆಗೆದುಹಾಕಲಾಯಿತು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೂರು ಚಾಕುಗಳು ವಶಕ್ಕೆ
ಘಟನಾ ಸ್ಥಳದಲ್ಲಿ ಪೊಲೀಸರು ರಕ್ತದ ಕಲೆಗಳಿದ್ದ ಮೂರು ಹರಿತವಾದ ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ನಡೆಸುವ ಸಾಧ್ಯತೆಯಿದೆ. ಆಯುಧಗಳ ಮೇಲಿರುವ ರಕ್ತದ ಮಾದರಿ, ಬೆರಳಚ್ಚು ಸೇರಿದಂತೆ ಇತರ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಕೊಲೆ ನಡೆದ ಸ್ಥಳದಿಂದ ದೊರೆತ ಸಾಕ್ಷ್ಯಗಳು ಮತ್ತು ಆರೋಪಿಯ ವೈದ್ಯಕೀಯ ವರದಿಯನ್ನು ಆಧರಿಸಿ ತನಿಖೆ ಮುಂದುವರಿದಿದೆ.

ಮಾಟಮಂತ್ರದ ಶಂಕೆಯೂ ತನಿಖೆಯಲ್ಲಿದೆ

ವಿಮಲಾ ದೇವಿ ಸಾಂಪ್ರದಾಯಿಕ ಚಿಕಿತ್ಸೆ, ಮಾಟಮಂತ್ರ ಹಾಗೂ ಭೂತೋಚ್ಚಾಟನೆಗೆ ಸಂಬಂಧಿಸಿದ ಕೆಲವು ಪದ್ಧತಿಗಳಲ್ಲಿ ಆಸಕ್ತಿ ಹೊಂದಿದ್ದಳು ಎನ್ನಲಾಗಿದೆ. ದಂಪತಿಗೆ ಮಕ್ಕಳಿರಲಿಲ್ಲ ಎಂಬ ಅಂಶವೂ ಈ ಹಿನ್ನೆಲೆಯೊಂದಿಗೆ ಚರ್ಚೆಗೆ ಬಂದಿದೆ.

ಆದರೆ ಮಹಿಳೆ ಮಾಟಮಂತ್ರ ಅಥವಾ ನರಬಲಿ ಉದ್ದೇಶದಿಂದಲೇ ಪತಿಯನ್ನು ಕೊಂದಿದ್ದಾಳೆ ಎಂದು ಪೊಲೀಸರು ಈವರೆಗೆ ಅಧಿಕೃತವಾಗಿ ದೃಢಪಡಿಸಿಲ್ಲ. ಕೊಲೆಯ ಹಿಂದೆ ಕೌಟುಂಬಿಕ ಕಲಹ, ವೈಯಕ್ತಿಕ ದ್ವೇಷ, ಮಾನಸಿಕ ಯಾವುದೇ ಕಾರಣವಿದೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಪೊಲೀಸರು ಮತ್ತು ವಿಧಿವಿಜ್ಞಾನ (FSL) ತಂಡಗಳು ಘಟನಾ ಸ್ಥಳದಿಂದ ದೊರೆತ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಇತರ ತನಿಖಾ ವರದಿಗಳ ಆಧಾರದ ಮೇಲೆ ಪ್ರಕರಣದ ನಿಜವಾದ ಕಾರಣವನ್ನು ಪತ್ತೆಹಚ್ಚಲು ಮುಂದಾಗಿವೆ.

Spread the love

Leave a Reply

Your email address will not be published. Required fields are marked *