ನೆಲಮಂಗಲದಲ್ಲಿ ಆನ್‌ಲೈನ್ ಗೇಮಿಂಗ್ ದುರಂತ! : ಸಾಲಬಾಧೆಗೆ ಹೆದರಿ ಗೃಹಿಣಿ ಆತ್ಮ*ತ್ಯೆ

ನೆಲಮಂಗಲ: ಆನ್‌ಲೈನ್ ಗೇಮಿಂಗ್ ಚಟಕ್ಕೆ ಒಳಗಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ ಗೃಹಿಣಿಯೊಬ್ಬರು ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕುಟುಂಬಸ್ಥರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ.

ಮೃತರನ್ನು ರಂಜಿತಾ (28) ಎಂದು ಗುರುತಿಸಲಾಗಿದೆ. ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ರಂಜಿತಾ ನೆಲಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಒಂದು ವರ್ಷದಿಂದ ಆನ್‌ಲೈನ್ ಗೇಮಿಂಗ್ ಚಟ

ರಂಜಿತಾ ಅವರು ಸುಮಾರು 10 ವರ್ಷಗಳ ಹಿಂದೆ ಅರುಣ್ ಎಂಬುವವರನ್ನು ವಿವಾಹವಾಗಿದ್ದರು. ಮೂಲತಃ ಗುಲ್ಬರ್ಗಾ ನಿವಾಸಿಗಳಾಗಿದ್ದ ಈ ದಂಪತಿ ಕಳೆದ ಐದು ವರ್ಷಗಳಿಂದ ನೆಲಮಂಗಲದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದಂಪತಿಗೆ ಏಳು ವರ್ಷದ ಮಗನಿದ್ದಾನೆ ಎಂದು ತಿಳಿದುಬಂದಿದೆ.

ಕಳೆದ ಒಂದು ವರ್ಷದ ಹಿಂದೆ ರಂಜಿತಾ ಅವರು ಆನ್‌ಲೈನ್ ಗೇಮಿಂಗ್‌ಗೆ ಹೆಚ್ಚು ತೊಡಗಿಕೊಂಡಿದ್ದರು ಎನ್ನಲಾಗಿದೆ. ಗೇಮಿಂಗ್‌ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದ ಅವರು ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆನ್‌ಲೈನ್ ಗೇಮಿಂಗ್‌ನಿಂದ ಹಣ ಕಳೆದುಕೊಂಡ ಹಿನ್ನೆಲೆಯಲ್ಲಿ ರಂಜಿತಾ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಪರಿಸ್ಥಿತಿ ಗಂಭೀರವಾದ ಬಳಿಕ ಅವರ ತಾಯಿ ಹಾಗೂ ಪತಿ ಅರುಣ್ ಸೇರಿಕೊಂಡು ಈಗಾಗಲೇ ಸುಮಾರು ₹15 ಲಕ್ಷದಷ್ಟು ಸಾಲವನ್ನು ತೀರಿಸಿದ್ದರು ಎಂದು ತಿಳಿದುಬಂದಿದೆ.

ಆದರೆ, ಸಾಲ ತೀರಿಸಿದ ಬಳಿಕವೂ ರಂಜಿತಾ ಆನ್‌ಲೈನ್ ಗೇಮಿಂಗ್ ಚಟವನ್ನು ಸಂಪೂರ್ಣವಾಗಿ ಬಿಡಲಿಲ್ಲ ಎನ್ನಲಾಗಿದೆ. ಮತ್ತೆ ಹಣ ಕಳೆದುಕೊಂಡು ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗಿದ್ದು, ಇದರಿಂದ ಕುಟುಂಬದಲ್ಲಿ ಆರ್ಥಿಕ ಒತ್ತಡ ಮತ್ತಷ್ಟು ಹೆಚ್ಚಾಗಿತ್ತು.

ಪತಿ ಗುಲ್ಬರ್ಗಾಕ್ಕೆ ತೆರಳಿದ್ದ ವೇಳೆ ಘಟನೆ

ಘಟನೆಗೂ ಒಂದು ದಿನ ಮೊದಲು ರಂಜಿತಾ ಅವರ ಪತಿ ಅರುಣ್ ಅವರು ಕೆಲಸದ ನಿಮಿತ್ತ ಗುಲ್ಬರ್ಗಾಕ್ಕೆ ತೆರಳಿದ್ದರು. ಮನೆಯಲ್ಲಿ ರಂಜಿತಾ ತಮ್ಮ ಏಳು ವರ್ಷದ ಮಗನೊಂದಿಗೆ ಇದ್ದರು ಎನ್ನಲಾಗಿದೆ.

ರಾತ್ರಿ ವೇಳೆ ರಂಜಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ತನಿಖೆ

ಮಾಹಿತಿ ಪಡೆದ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡಿರುವ ಪೊಲೀಸರು, ರಂಜಿತಾ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

ರಂಜಿತಾ ಆನ್‌ಲೈನ್ ಗೇಮಿಂಗ್‌ನಲ್ಲಿ ಕಳೆದುಕೊಂಡ ಹಣ, ಅವರು ಮಾಡಿಕೊಂಡಿದ್ದ ಸಾಲ ಹಾಗೂ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ನೆಲಮಂಗಲ ಸರ್ಕಾರಿ ಶವಾಗಾರದಲ್ಲಿ ರಂಜಿತಾ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *