ಮೈಸೂರು: ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸಾಲದ ಒತ್ತಡ ಈ ದುರಂತಕ್ಕೆ ಕಾರಣವೇ ಎಂಬ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಹರೀಶ್ (49), ಪತ್ನಿ ನಿಶ್ಚಿತ (36), ಪುತ್ರಿಯರಾದ ನೆಕ್ಸಾ (13) ಹಾಗೂ ರಕ್ಷಾ (6) ಎಂದು ಗುರುತಿಸಲಾಗಿದೆ. ಘಟನೆ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದ್ದು, ಇಡೀ ಪ್ರದೇಶವೇ ಶೋಕದಲ್ಲಿ ಮುಳುಗಿದೆ.
ಪ್ರಾಥಮಿಕ ತನಿಖೆ ಪ್ರಕಾರ, ಹರೀಶ್ ಮೊದಲು ಪತ್ನಿ ಹಾಗೂ ಇಬ್ಬರು ಮಕ್ಕಳ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಬಳಿಕ ಮನೆಯ ಮೊದಲ ಮಹಡಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಹುಣಸೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಸ್ಥಳದಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ ತಾನು ಮೇಲಿನ ಮಹಡಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವುದಾಗಿ ಹರೀಶ್ ಬರೆದಿರುವುದು ತಿಳಿದುಬಂದಿದೆ. ಅಲ್ಲದೆ, ಸಾಲದ ಒತ್ತಡ, ಆಸ್ತಿ ಸಂಬಂಧದ ಕೆಲವು ವಿವರಗಳು ಹಾಗೂ ಅಗತ್ಯ ದಾಖಲೆಗಳು ಲಾಕರ್ನಲ್ಲಿ ಇರುವುದಾಗಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಡೆತ್ನೋಟ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ಅದರಲ್ಲಿರುವ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಹರೀಶ್ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಒಂದು ಸೈಟ್ ವ್ಯವಹಾರದ ಹಿನ್ನೆಲೆಯಲ್ಲಿ ಸಾಲದ ಹೊರೆ ಹೆಚ್ಚಾಗಿರುವ ಬಗ್ಗೆ ಡೆತ್ನೋಟ್ನಲ್ಲಿ ಉಲ್ಲೇಖವಿದೆ ಎಂದು ತಿಳಿಸಿದ್ದಾರೆ. ಅವರ ಹೆಸರಿನಲ್ಲಿ ಮೂರು ಸೈಟ್ಗಳು, ಸ್ವಂತ ಮನೆ ಹಾಗೂ ಕಾರು ಇದ್ದು, ಅವುಗಳನ್ನು ಯಾರಿಗೆ ನೀಡಬೇಕು ಎಂಬ ವಿವರಗಳನ್ನೂ ಬರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸುಮಾರು 14 ವರ್ಷಗಳ ಹಿಂದೆ ಹರೀಶ್ ಮತ್ತು ನಿಶ್ಚಿತ ವಿವಾಹವಾಗಿದ್ದು, ಕುಟುಂಬದೊಂದಿಗೆ ಹರೀಶ್ ಅವರ ತಾಯಿಯೂ ವಾಸವಾಗಿದ್ದರು. ಆದರೆ ಘಟನೆ ನಡೆಯುವ ಎರಡು ದಿನಗಳ ಮೊದಲು ಅವರು ಪ್ರವಾಸಕ್ಕೆ ತೆರಳಿದ್ದರಿಂದ ಈ ದುರಂತದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ನಡೆದ ವೇಳೆ ಮನೆಯಲ್ಲಿ ಇತರರು ಯಾರೂ ಇರಲಿಲ್ಲ ಎನ್ನಲಾಗಿದೆ.
ಸದ್ಯ ಈ ಪ್ರಕರಣಕ್ಕೆ ನಿಖರ ಕಾರಣ ಏನು ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ. ಡೆತ್ನೋಟ್, ಆರ್ಥಿಕ ವ್ಯವಹಾರಗಳು, ಕುಟುಂಬದ ಹಿನ್ನೆಲೆ ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೃತರ ಸಾವಿಗೆ ನಿಜವಾದ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆ ಹಾಗೂ ತನಿಖೆ ಪೂರ್ಣಗೊಂಡ ಬಳಿಕವೇ ಸ್ಪಷ್ಟವಾಗಲಿದೆ.
