ನೆಲಮಂಗಲ: ಲಾರಿ ಚಕ್ರಕ್ಕೆ ಸಿಲುಕಿ ಎಂಬಿಎ ವಿದ್ಯಾರ್ಥಿ ಸಾ*

ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸ್ಕಿಡ್ ಆಗಿ ಲಾರಿ ಚಕ್ರಕ್ಕೆ ಸಿಲುಕಿದ ಪರಿಣಾಮ ಎಂಬಿಎ ವಿದ್ಯಾರ್ಥಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬಡಮಾರನಹಳ್ಳಿ ಗ್ರಾಮದ ನಿವಾಸಿ ಶಶಿಕುಮಾರ್ (24) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಉನ್ನತ ಶಿಕ್ಷಣದ ಜೊತೆಗೆ ಭವಿಷ್ಯದಲ್ಲಿ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಕನಸನ್ನು ಹೊಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಶಶಿಕುಮಾರ್ ಅವರು ಅಶ್ವತಮ್ಮ ಹಾಗೂ ರಾಜಣ್ಣ ದಂಪತಿಯ ಏಕೈಕ ಪುತ್ರರಾಗಿದ್ದರು. ಕುಟುಂಬದ ಆಸರೆ ಹಾಗೂ ಭವಿಷ್ಯದ ಭರವಸೆಯಾಗಿದ್ದ ಪುತ್ರನನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇಂದು ಬೆಳಿಗ್ಗೆ ಶಿರಾದಿಂದ ಬೆಂಗಳೂರಿನತ್ತ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ಸ್ಕಿಡ್ ಆಗಿದ್ದು, ಇದೇ ವೇಳೆ ಹಿಂಬದಿಯಿಂದ ಬಂದ ಲಾರಿಯ ಚಕ್ರಕ್ಕೆ ಸಿಲುಕಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಶವಾಗಾರಕ್ಕೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ದುರ್ಘಟನೆ ಶಿರಾ ತಾಲೂಕಿನ ಬಡಮಾರನಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದ್ದು, ಪೊಲೀಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಯುವಕನ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.

Spread the love

Leave a Reply

Your email address will not be published. Required fields are marked *