ನೆಲಮಂಗಲ: ದೇವರ ದರ್ಶನಕ್ಕೆ ಕೇರಳಕ್ಕೆ ತೆರಳಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಯುವಕನೊಬ್ಬ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತ ಯುವಕನನ್ನು ಬ್ಯಾಡರಹಳ್ಳಿ ನಿವಾಸಿ ಸಂತೋಷ್ (21) ಎಂದು ಗುರುತಿಸಲಾಗಿದೆ.
ಸಂತೋಷ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕೇರಳದ ಕೊಟ್ಟಿಯೂರ್ ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ತೆರಳಿದ್ದರು. ದೇವರ ದರ್ಶನ ಮುಗಿದ ಬಳಿಕ ಅವರು ಕಣ್ಣೂರಿನ ಕಡಲತೀರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಮುದ್ರದಲ್ಲಿ ಈಜಲು ತೆರಳಿದ ಸಂತೋಷ್ ಮತ್ತು ಮತ್ತೋರ್ವ ಯುವಕ ಅಲೆಗಳ ಸೆಳೆತಕ್ಕೆ ಸಿಲುಕಿದ್ದಾರೆ.

ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದರೂ ಈಜಲು ಮುಂದಾದ ಯುವಕರು ಅಪಾಯಕ್ಕೆ ಸಿಲುಕಿದ್ದು, ಜೋರಾದ ಅಲೆಯಲ್ಲಿ ಸಂತೋಷ್ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳದಲ್ಲಿದ್ದವರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಘಟನೆಯ ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಯುವಕ ಅಲೆಗಳ ನಡುವೆ ಸಿಲುಕಿ ಸಹಾಯಕ್ಕಾಗಿ ಹೋರಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಬಳಿಕ ಶೋಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಸಂತೋಷ್ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.
ಘಟನೆ ಸಂಬಂಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಯುವಕನ ಅಕಾಲಿಕ ಸಾವಿನಿಂದ ಕುಟುಂಬಸ್ಥರು ಹಾಗೂ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
