ನೆಲಮಂಗಲ: ಕುಟುಂಬ ಕಲಹ ಹಿನ್ನೆಲೆ ಆಟೋ ಚಾಲಕ ಅನುಮಾನಾಸ್ಪದ ಸಾ**

ಕುಟುಂಬ ಕಲಹ ಹಿನ್ನೆಲೆ ಆಟೋ ಚಾಲಕ ಅನುಮಾನಾಸ್ಪದ ಸಾವು

ಬೆಂಗಳೂರು ಉತ್ತರ ತಾಲೂಕಿನ ಶಿವನಪುರದಲ್ಲಿ ಆಟೋ ಚಾಲಕನೊಬ್ಬ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತರನ್ನು ಸಾಗರ್ (30) ಎಂದು ಗುರುತಿಸಲಾಗಿದೆ.

ಕುಟುಂಬದವರ ಹೇಳಿಕೆಯ ಪ್ರಕಾರ, ಬುಧವಾರ ರಾತ್ರಿ ಸಾಗರ್ ಮತ್ತು ಪತ್ನಿಯ ನಡುವೆ ವಾಗ್ವಾದ ನಡೆದಿದೆ. ಬಳಿಕ ಪತ್ನಿಯ ತಾಯಿ ಹಾಗೂ ತಂಗಿ ಮನೆಗೆ ಬಂದು ಗಲಾಟೆ ನಡೆಸಿದ್ದು, ಸಾಗರ್ ಜೊತೆ ತಕರಾರು ನಡೆದಿದೆ ಎನ್ನಲಾಗಿದೆ. ಈ ಘಟನೆ ಬಳಿಕ ಪತ್ನಿ ತವರು ಮನೆಗೆ ತೆರಳಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಡರಾತ್ರಿವರೆಗೂ ಸಾಗರ್ ಪತ್ನಿಗೆ ಸಂದೇಶ ಕಳುಹಿಸಿದ್ದರೂ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. ಬಳಿಕ ಸಾಗರ್ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕುಟುಂಬದವರ ಪ್ರಕಾರ, ಪ್ರತ್ಯೇಕವಾಗಿ ಮನೆ ಮಾಡುವ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಭಿನ್ನಾಭಿಪ್ರಾಯ ಉಂಟಾಗುತ್ತಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಬಿಟ್ಟು ಬರುವುದಿಲ್ಲ ಎಂದು ಸಾಗರ್ ಹೇಳುತ್ತಿದ್ದ ಕಾರಣಕ್ಕೆ ಕಲಹ ನಡೆಯುತ್ತಿತ್ತೆಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಸಾಗರ್ ಪತ್ನಿ ದಿವ್ಯ ತಮ್ಮ ಪ್ರತಿಕ್ರಿಯೆಯಲ್ಲಿ, “ತವರು ಮನೆಯಿಂದ ಹಣ ತರಬೇಕೆಂದು ಸಾಗರ್ ಕೇಳಿದ್ದರು. ನಾನು ಹಣ ತರಲಿಲ್ಲ. ಈ ವಿಚಾರಕ್ಕೆ ರಾತ್ರಿ ಮನೆಯಲ್ಲಿ ಗಲಾಟೆ ನಡೆಯಿತು. ನಂತರ ನನ್ನ ತಾಯಿ ಮನೆಗೆ ಬಂದರು. ನನಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದರಿಂದ ಸಾಗರ್ ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಬಳಿಕ ಮನೆಗೆ ಹೋದ ನಂತರ ಈ ಘಟನೆ ನಡೆದಿದೆ” ಎಂದು ತಿಳಿಸಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Spread the love

Leave a Reply

Your email address will not be published. Required fields are marked *