ಬಟ್ಟೆ ತೊಳೆಯಲು ಹೋಗಿದ್ದ ಬಾಲಕಿಯರು ನೀರಲ್ಲಿ ಮುಳುಗಿ ದುರ್ಮ*ರಣ

ಕೊಪ್ಪಳ ಜಿಲ್ಲೆಯಲ್ಲಿ ಮನಕಲಕುವ ದುರ್ಘಟನೆ ನಡೆದಿದ್ದು, ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದಾರೆ. ಬಟ್ಟೆ ತೊಳೆಯಲು ತೆರಳಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದ್ದು, ಮೃತ ಬಾಲಕಿಯರ ಕುಟುಂಬಗಳಲ್ಲಿ ಆಕ್ರಂದನ ಮೇಳೈಸಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಸಮೀಪ ಈ ದುರ್ಘಟನೆ ನಡೆದಿದೆ. ಮೃತಪಟ್ಟ ಬಾಲಕಿಯರನ್ನು ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದ ಲಕ್ಷ್ಮವ್ವ ಹರಣಸಿಕಾರಿ (15) ಹಾಗೂ ಮುತ್ತವ್ವ ಹರಣಸಿಕಾರಿ (8) ಎಂದು ಗುರುತಿಸಲಾಗಿದೆ.

ಮಾಹಿತಿ ಪ್ರಕಾರ, ಯರೇಹಂಚಿನಾಳ ಗ್ರಾಮದಿಂದ ಗದಿಗೆ ಹೋಗುವ ರಸ್ತೆ ಪಕ್ಕದಲ್ಲಿರುವ 362ನೇ ಸರ್ವೆ ನಂಬರಿನ ಕೃಷಿ ಹೊಂಡದ ಬಳಿ ಬಾಲಕಿಯರು ಬಟ್ಟೆ ತೊಳೆಯಲು ತೆರಳಿದ್ದರು. ಈ ವೇಳೆ ನೀರಿನ ಅಂಚಿನಲ್ಲಿ ನಿಂತಿದ್ದಾಗ ಏಕಾಏಕಿ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಹೊಂಡದಲ್ಲಿ ನೀರು ಆಳವಾಗಿದ್ದ ಕಾರಣ ಇಬ್ಬರೂ ಹೊರಬರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ.

ಘಟನೆ ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿದರೂ, ಆಗಲೇ ಇಬ್ಬರು ಬಾಲಕಿಯರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಬಳಿಕ ಗ್ರಾಮಸ್ಥರು ಹಾಗೂ ಪೊಲೀಸರು ಮೃತದೇಹಗಳನ್ನು ಹೊರತೆಗೆದರು.

ಮೃತ ಬಾಲಕಿಯರ ಕುಟುಂಬಗಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು, ಮಕ್ಕಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. “ಬಟ್ಟೆ ತೊಳೆಯಲು ಹೋಗಿದ್ದ ಮಕ್ಕಳು ಮರಳಿ ಬಾರದಂತಾಗಿದೆ” ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಗ್ರಾಮದಲ್ಲಿಯೂ ಶೋಕದ ವಾತಾವರಣ ನಿರ್ಮಾಣವಾಗಿದೆ.

ಘಟನೆಯ ಬಳಿಕ ಸ್ಥಳೀಯರು ಕೃಷಿ ಹೊಂಡಗಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ತೆರೆದ ಕೃಷಿ ಹೊಂಡಗಳಿಗೆ ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹೊಂಡಗಳ ಸುತ್ತ ಬೇಲಿ ನಿರ್ಮಾಣ ಮಾಡಬೇಕು ಹಾಗೂ ಎಚ್ಚರಿಕೆ ಫಲಕ ಅಳವಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಕುಕನೂರು ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದೇ ವೇಳೆ ಮೃತ ಬಾಲಕಿಯರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Spread the love

Leave a Reply

Your email address will not be published. Required fields are marked *