ನೆಲಮಂಗಲದಲ್ಲಿ ಮನಕಲಕುವ ಘಟನೆ ನಡೆದಿದ್ದು, ಪತಿಯ ನಿರಂತರ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ನೀನು ದಪ್ಪ ಇದ್ದೀಯಾ, ನಿನಗೆ ಮಗು ಆಗಲ್ಲ” ಎಂದು ಅವಮಾನಿಸಿ ಮಾನಸಿಕವಾಗಿ ಹಿಂಸಿಸುತ್ತಿದ್ದ ಪತಿಯ ವರ್ತನೆಗೆ ಬೇಸತ್ತ ಮಹಿಳೆ ಕೊನೆಗೆ ಜೀವಕ್ಕೆ ತೆರೆ ಎಳೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶಿವಲೀಲಾ ಎಂದು ಗುರುತಿಸಲಾಗಿದೆ. ಮೂಲತಃ ಕಲಬುರಗಿ ಮೂಲದ ಶಿವಲೀಲಾ ಸುಮಾರು ಆರು ವರ್ಷಗಳ ಹಿಂದೆ ಕೆಲಸದ ಹುಡುಕಾಟದಲ್ಲಿ ಬೆಂಗಳೂರಿನ ಕಾಟನ್ಪೇಟೆ ಭಾಗಕ್ಕೆ ಬಂದಿದ್ದರು. ಈ ವೇಳೆ ಲಕ್ಷ್ಮಣ ಎಂಬಾತನ ಪರಿಚಯವಾಗಿದ್ದು, ಪರಿಚಯ ನಂತರ ಇಬ್ಬರ ಮಧ್ಯೆ ಪ್ರೀತಿ ಬೆಳೆದಿತ್ತು. ಕುಟುಂಬದವರ ವಿರೋಧದ ನಡುವೆಯೂ ನಾಲ್ಕು ವರ್ಷಗಳ ಹಿಂದೆ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.
ಮದುವೆಯಾದ ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಸುಖಕರವಾಗಿದ್ದರೂ, ಬಳಿಕ ಲಕ್ಷ್ಮಣನ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು ಎನ್ನಲಾಗಿದೆ. “ನಿನಗೆ ಮಕ್ಕಳಾಗಲ್ಲ”, “ನೀನು ದಪ್ಪ ಇದ್ದೀಯಾ” ಎಂದು ಅವಮಾನಕಾರಿ ಮಾತುಗಳನ್ನಾಡಿ ಪತ್ನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದನು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ ಮದ್ಯಪಾನ ಮಾಡಿ ಮನೆಗೆ ಬಂದು ಜಗಳ ಮಾಡುವುದು, ವರದಕ್ಷಿಣೆ ತರುವಂತೆ ಒತ್ತಾಯಿಸುವುದು ಸೇರಿದಂತೆ ಹಲವು ರೀತಿಯ ಹಿಂಸೆ ನೀಡುತ್ತಿದ್ದನೆಂದು ತಿಳಿದುಬಂದಿದೆ.
ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ದಂಪತಿ ವಾಸವಾಗಿದ್ದು, ಪತಿಯ ಕಿರುಕುಳದಿಂದ ಶಿವಲೀಲಾ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಹಲವು ಬಾರಿ ಕುಟುಂಬದವರೊಂದಿಗೆ ಈ ಬಗ್ಗೆ ನೋವು ಹಂಚಿಕೊಂಡಿದ್ದರೂ, ಪ್ರೀತಿಸಿ ಮದುವೆಯಾದ ಕಾರಣ ಎಲ್ಲವೂ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಜೀವನ ಮುಂದುವರಿಸುತ್ತಿದ್ದರು ಎಂದು ಹೇಳಲಾಗಿದೆ.
ಆದರೆ ಪತಿಯ ನಿರಂತರ ಅವಮಾನ ಮತ್ತು ಕಿರುಕುಳದಿಂದ ಮನನೊಂದು ಶಿವಲೀಲಾ ಕಳೆದ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಕುಟುಂಬಸ್ಥರಲ್ಲಿ ಆಕ್ರಂದನ ಮೇಳೈಸಿದ್ದು, ಮೃತೆಯ ಪೋಷಕರು ಗಂಡ ಲಕ್ಷ್ಮಣ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
“ಪ್ರೀತಿಸಿ ಮದುವೆಯಾಗಿದ್ದರೂ ಮಗಳ ಜೀವನವನ್ನು ಹಾಳು ಮಾಡಿದ್ದಾನೆ. ಮದುವೆಯಾದ ಬಳಿಕ ನಿರಂತರ ಕಿರುಕುಳ ನೀಡಿ ಸಾವಿನ ದಾರಿಗೆ ತಳ್ಳಿದ್ದಾನೆ” ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತೆಯ ಪೋಷಕರ ದೂರಿನ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತಿಯ ಕಿರುಕುಳವೇ ಆತ್ಮಹತ್ಯೆಗೆ ಕಾರಣವೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
