ಬೆಂಗಳೂರು ಗ್ರಾಮಾಂತರ: ಕಳಲುಗಟ್ಟ ಗ್ರಾಮದಲ್ಲಿ ಸರ್ಕಾರಿ ಜಾಗದ ಮೇಲೆ ನಡೆದ ಅಕ್ರಮ ಒತ್ತುವರಿಯನ್ನು ಒಂದುಗೂಡಿದ ಗ್ರಾಮ ಯುವಕರು ಸತತ ಹೋರಾಟದ ಮೂಲಕ ತೆರವುಗೊಳಿಸಿ ಗಮನ ಸೆಳೆದಿದ್ದಾರೆ. ಸುಮಾರು ಒಂದೂವರೆ ವರ್ಷಗಳ ನಿರಂತರ ಹೋರಾಟದ ಬಳಿಕ, ಕೊನೆಗೂ ಯುವಕರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಅಕ್ರಮವಾಗಿ ವಶಪಡಿಸಿಕೊಂಡಿದ್ದ ಜಾಗವನ್ನು ಮರಳಿ ಸರ್ಕಾರದ ಹಸ್ತಕ್ಕೆ ತಂದಿದ್ದಾರೆ.
ಪಕ್ಕದ ಸೈಟ್ ಮಾಲೀಕನು ಯಾವುದೇ ದಾಖಲೆಗಳಿಲ್ಲದೆ ಸರ್ಕಾರಿ ಜಾಗವನ್ನು ತನ್ನದೇ ಎಂದು ಹೇಳಿಕೊಂಡು ಒತ್ತುವರಿ ಮಾಡಿಕೊಂಡಿದ್ದನು. ಇದರಿಂದ ಸಾರ್ವಜನಿಕ ಬಳಕೆಗೆ ಮೀಸಲಾಗಿದ್ದ ಜಾಗ ಕಳೆದುಹೋಗುವ ಆತಂಕ ಗ್ರಾಮಸ್ಥರಲ್ಲಿ ಮೂಡಿತ್ತು. ಆರಂಭದಲ್ಲಿ ಸ್ಥಳೀಯ ಮಟ್ಟದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರೂ, ಅಧಿಕಾರಿಗಳಿಂದ ತಕ್ಷಣದ ಕ್ರಮ ಕೈಗೊಳ್ಳದ ಹಿನ್ನೆಲೆ ಯುವಕರು ಹೋರಾಟದ ಮಾರ್ಗ ಹಿಡಿದರು.
ಗ್ರಾಮದ ಯುವಕರು ಒಗ್ಗಟ್ಟಿನಿಂದ ಮುಂದಾಗಿ, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಸಂಬAಧಿತ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು. ಆದರೂ ಸಮಸ್ಯೆಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ, ಅವರು ನ್ಯಾಯಾಲಯದ ಮೊರೆ ಹೋಗುವ ನಿರ್ಧಾರ ಕೈಗೊಂಡರು. ಕಾನೂನು ಹೋರಾಟವನ್ನು ಗಂಭೀರವಾಗಿ ಮುಂದುವರಿಸಿದ ಯುವಕರು, ಕೊನೆಗೆ ನ್ಯಾಯಾಲಯದಿಂದ ತಮ್ಮ ಪರ ತೀರ್ಪು ಪಡೆಯುವಲ್ಲಿ ಯಶಸ್ವಿಯಾದರು.

ನ್ಯಾಯಾಲಯದ ಆದೇಶದ ಮೇರೆಗೆ, ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಯಿತು. ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಡ್ ಗೋಡೆಯನ್ನು ಕೂಡ ಕೆಡವಲಾಗಿದ್ದು, ಜಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಗ್ರಾಮ ಯುವಕರು ಸಕ್ರಿಯವಾಗಿ ಭಾಗವಹಿಸಿದ್ದು, ಹೋರಾಟದ ಯಶಸ್ಸಿಗೆ ಕಾರಣವಾಯಿತು.
ಈ ಹೋರಾಟದಲ್ಲಿ ರೆವೆನ್ಯೂ ಇನ್ಸ್ಪೆಕ್ಟರ್ ಮಹೇಶ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಮಹತ್ವದ ಪಾತ್ರವಹಿಸಿದ್ದು, ಕಾನೂನು ಪ್ರಕ್ರಿಯೆ ಮತ್ತು ಆಡಳಿತಾತ್ಮಕ ಕ್ರಮಗಳಲ್ಲಿ ಯುವಕರಿಗೆ ಬೆಂಬಲ ನೀಡಿದರು ಯುವಕರಿಗೆ ಹಿರಿದಾದ ಪ್ರೋತ್ಸಾಹ ನೀಡಿ, ಹೋರಾಟವನ್ನು ನಿರಂತರವಾಗಿ ಮುಂದುವರಿಸಲು ಧೈರ್ಯ ತುಂಬಿದರು.

ಹೋರಾಟದಲ್ಲಿ ಪ್ರಮುಖವಾಗಿ ಭಾಗವಹಿಸಿದ ಗ್ರಾಮ ಯುವಕರಲ್ಲಿ ಕೃಷ್ಣಮೂರ್ತಿ, ರಂಜಿತ್, ಸಿದ್ದರಾಜು, ಚಿರಂತ್, ಅಜಯ್, ಶಶಿಕುಮಾರ್, ತೇಜಸ್, ದೇವರಾಜ್, ನಾಗರಾಜ್, ಅಕ್ಷಯ್, ರಮೇಶ್, ನಾಗೇಶ್, ಸಿದ್ದಗಂಗಮ್ಮ, ಗಂಗರಾಜಮ್ಮ, ಕೆಂಪಮ್ಮ ಮತ್ತು ಭಾಗ್ಯಮ್ಮ ಸೇರಿದಂತೆ ಅನೇಕರು ಇದ್ದರು. ಇವರ ಒಗ್ಗಟ್ಟು ಮತ್ತು ದೃಢಸಂಕಲ್ಪವೇ ಈ ಹೋರಾಟದ ಯಶಸ್ಸಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಗ್ರಾಮದ ಯುವಕರ ಈ ಹೋರಾಟವು ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮತ್ತು ಒಗ್ಗಟ್ಟಿನ ಶಕ್ತಿಯನ್ನು ತೋರಿಸಿದ್ದು, ಅಕ್ರಮಗಳ ವಿರುದ್ಧ ಗಿಕಾನೂನು ಮಾರ್ಗದಲ್ಲಿ ಹೋರಾಡಿದರೆ ನ್ಯಾಯ ದೊರೆಯುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಇದೀಗ ಜಾಗವನ್ನು ಮತ್ತೆ ಸಾರ್ವಜನಿಕ ಉಪಯೋಗಕ್ಕೆ ಬಳಸುವ ಕುರಿತು ಗ್ರಾಮಸ್ಥರು ಯೋಜನೆ ರೂಪಿಸುತ್ತಿದ್ದಾರೆ.
ಕಳಲುಗಟ್ಟ ಗ್ರಾಮದ ಈ ಘಟನೆ, ಯುವಶಕ್ತಿ ಹಾಗೂ ಕಾನೂನು ಹೋರಾಟದ ಮಹತ್ವವನ್ನು ಒತ್ತಿ ಹೇಳುವ ಪ್ರೇರಣಾದಾಯಕ ಉದಾಹರಣೆಯಾಗಿ ಪರಿಣಮಿಸಿದೆ.
