ಮೈಸೂರು: ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪದ ಒತ್ತಡವನ್ನು ತಾಳಲಾರದೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಪಿರಿಯಾಪಟ್ಟಣ ತಾಲೂಕಿನ ಕುಡಕೂರು ಗ್ರಾಮದ ನಿವಾಸಿ ರಾಮು (27) ಎಂಬ ಯುವಕನೇ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ ಆತ್ಮಹತ್ಯೆಗೆ ಮೊದಲು ವಾಟ್ಸಪ್ ವಾಯ್ಸ್ ನೋಟ್ ಮೂಲಕ ತನ್ನ ನೋವನ್ನೂ, ಘಟನೆ ಹಿಂದೆ ನಿಜವಾದ ಕಾರಣವನ್ನೂ ಬಿಚ್ಚಿಟ್ಟಿದ್ದಾನೆ ಎಂದು ಕುಟುಂಬದವರು ಹೇಳಿದ್ದಾರೆ.
ವಾಯ್ಸ್ ನೋಟ್ನಲ್ಲಿ — “ನಾನು ಯಾವುದಕ್ಕೂ ಕಾರಣನಲ್ಲ, ಆ ವಿದ್ಯಾರ್ಥಿನಿ ಗರ್ಭಿಣಿಯಾಗುವುದಕ್ಕೆ ಆಕೆಯ ಶಾಲೆಯ ದೈಹಿಕ ಶಿಕ್ಷಕ (ಪಿಟಿ ಟೀಚರ್) ಕಾರಣ. ಆದರೂ ನನ್ನ ಮೇಲೆಯೇ ಸುಳ್ಳು ಆರೋಪ ಮಾಡಿದ್ದಾರೆ. ನಾನು ಹುಡುಗಿಯ ಜೊತೆ ಕೇವಲ ಸಲುಗೆಯಿಂದ ಮಾತನಾಡಿದ್ದೇನೆ ಅಷ್ಟೆ. ಈಗ ನನ್ನ ಹೆಸರು ಹಾಳು ಮಾಡ್ತಿದ್ದಾರೆ. ಶಾಲೆಗೆ ಕಳಂಕ ಬಾರದಂತೆ ಎಲ್ಲರೂ ಕೇಸ್ ಮುಚ್ಚಿ ಹಾಕ್ತಿದ್ದಾರೆ” — ಎಂದು ರಾಮು ವಿಷಾದ ವ್ಯಕ್ತಪಡಿಸಿದ್ದಾನೆ.
ಅದೇ ವೇಳೆ, “ಪಿಟಿ ಟೀಚರ್ ಮಾಡಿದ ತಪ್ಪಿಗೆ ನಾನು ಬಲಿಯಾಗುತ್ತಿದ್ದೇನೆ. ಹುಡುಗಿ ಮಾತನಾಡಿದ್ದಕ್ಕೆ ನನ್ನ ಮೇಲೆ ಆರೋಪ ಹೊರಿಸಿದ್ದಾರೆ. ಇಂತಹ ಸುಳ್ಳು ಆರೋಪಗಳನ್ನು ಸಹಿಸಲು ಆಗುತ್ತಿಲ್ಲ, ನಾನು ನನ್ನ ಪ್ರಾಣವನ್ನೇ ಕೊಡುವ ನಿರ್ಧಾರ ಮಾಡಿದ್ದೇನೆ” ಎಂದು ಹೇಳಿ ಆತ್ಮಹತ್ಯೆ ಮಾಡುವ ಮುನ್ನ ವಾಯ್ಸ್ ನೋಟ್ ಕಳುಹಿಸಿದ್ದಾನೆ.
ಅಕ್ಟೋಬರ್ 31ರಂದು ರಾಮು ನಾಪತ್ತೆಯಾಗಿದ್ದಾಗ, ಕುಟುಂಬಸ್ಥರು ಆತ ಎಲ್ಲಿಗೆ ಹೋದ ಎಂಬುದು ಗೊತ್ತಾಗದೇ ಹುಡುಕಾಟ ಆರಂಭಿಸಿದ್ದರು. ಇದೀಗ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ತುಂಗಾ ನಾಲೆಯಲ್ಲಿ ಅವನ ಶವ ಪತ್ತೆಯಾಗಿದ್ದು, ಸ್ಥಳೀಯ ಪೊಲೀಸರಿಂದ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ನಂತರ ಗ್ರಾಮದಲ್ಲಿ ಆಕ್ರೋಶದ ವಾತಾವರಣ ನಿರ್ಮಾಣವಾಗಿದ್ದು, ಆರೋಪಿತ ಶಾಲಾ ಪಿಟಿ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಪೊಲೀಸರು ವಾಯ್ಸ್ ನೋಟ್ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ಪರಿಶೀಲನೆಗೆ ತೆಗೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ
