ದುಪ್ಪಟ್ಟು ದರದ ದಂಧೆಗೆ ಬ್ರೇಕ್ ಹಾಕಿದ ಸಾರಿಗೆ ಇಲಾಖೆ

ದುಪ್ಪಟ್ಟು ದರದ ದಂಧೆಗೆ ಬ್ರೇಕ್ ಹಾಕಿದ ಸಾರಿಗೆ ಇಲಾಖೆ

ಬೆಂಗಳೂರು: ಗೌರಿ-ಗಣೇಶ ಹಬ್ಬ ಹಾಗೂ ಸರಣಿ ರಜೆಯ ಪ್ರಯುಕ್ತ ಹೊರ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಹಿನ್ನೆಲೆಯಲ್ಲಿ, ಖಾಸಗಿ ಬಸ್‌ ಹಾಗೂ ಟ್ರಾವೆಲ್ಸ್‌ ಮಾಲೀಕರು ಟಿಕೆಟ್ ದರವನ್ನು ಅನಧಿಕೃತವಾಗಿ ದುಪ್ಪಟ್ಟುಗೂ ಹೆಚ್ಚು ವಸೂಲಿ ಮಾಡುತ್ತಿರುವ ಬಗ್ಗೆ ಹಲವು ಸಾರ್ವಜನಿಕ ದೂರುಗಳು ಸಾರಿಗೆ ಇಲಾಖೆಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ರಾಜ್ಯಾದ್ಯಂತ ಆಗಸ್ಟ್‌ 22ರಿಂದ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿರುವ ಅಧಿಕಾರಿಗಳು ಈಗಾಗಲೇ 2,250ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸಾರಿಗೆ ಇಲಾಖೆಯ ತಪಾಸಣೆ ಕಾರ್ಯಾಚರಣೆ

ಹಬ್ಬ ಹಾಗೂ ರಜೆಯ ಸಂಧರ್ಭದಲ್ಲಿ, ಪ್ರಯಾಣಿಕರಿಗೆ ಹೆಚ್ಚಿನ ಬಸ್‌ ಅವಶ್ಯಕತೆ ಇರುವುದನ್ನು ದುರುಪಯೋಗಪಡಿಸಿಕೊಂಡು, ಖಾಸಗಿ ಬಸ್‌ ಹಾಗೂ ಟ್ರಾವೆಲ್ಸ್‌ ಏಜೆನ್ಸಿಗಳು ಆನ್‌ಲೈನ್‌ ಬುಕ್ಕಿಂಗ್‌ ಮೂಲಕ ಸಾಮಾನ್ಯ ದರಕ್ಕಿಂತ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದನ್ನು ಪರಿಶೀಲನೆ ವೇಳೆ ಪತ್ತೆಹಚ್ಚಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿರುವ ಬಸ್‌ ಹಾಗೂ ಟ್ರಾವೆಲ್ಸ್‌ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ತೆರಿಗೆ ಬಾಕಿ, ಅನಧಿಕೃತ ದರ ವಸೂಲಿ ಹಾಗೂ ಇತರ ನಿಯಮ ಉಲ್ಲಂಘನೆಗಳನ್ನು ತಪಾಸಣೆ ಮಾಡುವ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ.

ಬಾಕಿ ತೆರಿಗೆ ಮತ್ತು ದಂಡ ವಸೂಲಿ

ಇಲ್ಲಿಯವರೆಗೆ ನಡೆದ ಕಾರ್ಯಾಚರಣೆಯ ಭಾಗವಾಗಿ, ಒಟ್ಟು 21.83 ಲಕ್ಷ ರೂಪಾಯಿ ತೆರಿಗೆ ಬಾಕಿ ವಸೂಲಿ ಮಾಡಲಾಗಿದ್ದು, 31.75 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಸಾರಿಗೆ ಇಲಾಖೆಯ ಆಯುಕ್ತ ಎ.ಎಂ. ಯೋಗೀಶ್‌ ಖಾಸಗಿ ಬಸ್‌ ಮಾಲೀಕರಿಗೆ ಸ್ಪಷ್ಟ ಸೂಚನೆ ನೀಡಿದ್ದು, ಸಾಮಾನ್ಯ ಪ್ರಯಾಣ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುವುದು ಕಾನೂನುಬಾಹಿರವಾಗಿರುವುದರಿಂದ ತಕ್ಷಣ ನಿಲ್ಲಿಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಕಠಿಣ ಕ್ರಮದ ಎಚ್ಚರಿಕೆ

ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತೆ ಎಂ.ಪಿ. ಓಂಕಾರೇಶ್ವರಿ ಅವರು, “ಇಲಾಖೆಯ ನಿರ್ದೇಶನಗಳನ್ನು ಲೆಕ್ಕಿಸದೆ ಖಾಸಗಿ ಬಸ್‌ ಮಾಲೀಕರು ದುಪ್ಪಟ್ಟು ದರ ವಸೂಲಿ ಮುಂದುವರೆಸಿದರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಅಷ್ಟೇ ಅಲ್ಲದೆ, ಅವರ ಟಿಕೆಟ್ ಬುಕ್ಕಿಂಗ್‌ ಆ್ಯಪ್‌ಗಳನ್ನು ನಿಷೇಧಿಸುವುದಕ್ಕೂ ಇಲಾಖೆಯು ಹಿಂಜರಿಯುವುದಿಲ್ಲ” ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಹೆಚ್ಚುವರಿ ಬಸ್‌ ಸೌಲಭ್ಯ

ಇದೇ ವೇಳೆ ಹಬ್ಬದ ಪ್ರಯಾಣಿಕರ ಹಿತದೃಷ್ಟಿಯಿಂದ ರಾಜ್ಯ ಸಾರಿಗೆ ಸಂಸ್ಥೆಗಳು ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿವೆ. ವಿಶೇಷವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಹಾಗೂ ಬಾಗಲಕೋಟೆ ಸೇರಿದಂತೆ ಹಲವು ವಿಭಾಗಗಳಿಂದ 265 ಹೆಚ್ಚುವರಿ ಬಸ್‌ಗಳನ್ನು ಹಬ್ಬದ ಪ್ರಯುಕ್ತ ಸಂಚಾರಕ್ಕೆ ಬಿಡುತ್ತಿದೆ.

ಅಷ್ಟೇ ಅಲ್ಲದೆ, ಆಗಸ್ಟ್‌ 22ರಿಂದ 26ರವರೆಗೆ ಬೆಂಗಳೂರಿನಿಂದ ರಾಜ್ಯದ ವಿಭಿನ್ನ ಜಿಲ್ಲೆಗಳು ಹಾಗೂ ಅಂತಾರಾಜ್ಯ ಗಮ್ಯಸ್ಥಾನಗಳಿಗೆ ಹೆಚ್ಚುವರಿ ವಿಶೇಷ ಬಸ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದರಿಂದ ಹಬ್ಬದ ಸಂದರ್ಭದಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಒದಗಲಿದೆ ಎಂದು ಸಾರಿಗೆ ಸಂಸ್ಥೆಗಳು ತಿಳಿಸಿವೆ.

Spread the love

Leave a Reply

Your email address will not be published. Required fields are marked *