ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭ
ಬೆಂಗಳೂರು, ಆಗಸ್ಟ್ 21: ಬಹು ನಿರೀಕ್ಷಿತ ಬೈಕ್ ಟ್ಯಾಕ್ಸಿ ಸೇವೆ ಇಂದು ಬೆಂಗಳೂರಿನ ಜೊತೆಗೆ ಕರ್ನಾಟಕದಾದ್ಯಂತ ಮತ್ತೆ ಪ್ರಾರಂಭಗೊಂಡಿದೆ. ಕಳೆದ ಜೂನ್ 16ರಿಂದ ಸುರಕ್ಷತಾ ಕಾರಣಗಳನ್ನು ಉಲ್ಲೇಖಿಸಿ ಸರ್ಕಾರ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿತ್ತು. ಆದರೆ, ಈ ನಿರ್ಧಾರದ ವಿರುದ್ಧವಾಗಿ ಆ್ಯಪ್ ಆಧಾರಿತ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿದ್ದರಿಂದ, ಹೈಕೋರ್ಟ್ ನಿರ್ದೇಶನದ ಮೇರೆಗೆ ಇಂದು ಸೇವೆ ಪುನಃ ಆರಂಭವಾಗಿದೆ.
ಪ್ರಸ್ತುತ ಓಲಾ ಹೊರತುಪಡಿಸಿ ಊಬರ್ ಮತ್ತು ರ್ಯಾಪಿಡೋ ಆ್ಯಪ್‌ಗಳ ಮೂಲಕ ಮಾತ್ರ ಬೈಕ್ ಟ್ಯಾಕ್ಸಿ ಪ್ರಯಾಣಿಕರಿಗೆ ಲಭ್ಯವಿದೆ. ಆಟೋ ಮತ್ತು ಕ್ಯಾಬ್‌ಗಳ ಅತಿ ಹೆಚ್ಚು ದರದಿಂದ ಬೇಸತ್ತಿದ್ದ ನಾಗರಿಕರಿಗೆ ಇದು ಸ್ವಲ್ಪ ಮಟ್ಟಿನ ಆರ್ಥಿಕ ಪರಿಹಾರ ಒದಗಿಸುವ ನಿರೀಕ್ಷೆಯಿದೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಕೆಲಸಕ್ಕೆ ಹೋಗುವವರಿಂದ ಹಿಡಿದು ವಿದ್ಯಾರ್ಥಿಗಳವರೆಗೆ ಹಲವು ಜನರು ಈ ಸೇವೆಗೆ ನಂಬಿಕೊಂಡಿದ್ದಾರೆ.
ಬೈಕ್ ಟ್ಯಾಕ್ಸಿ ಸೇವೆ ನಿಷೇಧಕ್ಕೆ ಖಾಸಗಿ ಸಾರಿಗೆ ಸಂಘಟನೆಗಳು ತೀವ್ರವಾಗಿ ಒತ್ತಾಯ ಮಾಡಿದ್ದವು. ಅವರ ಆಕ್ರೋಶ ಮತ್ತು ರಸ್ತೆ ಸುರಕ್ಷತೆ ಸಂಬಂಧಿತ ಚಿಂತನೆಗಳ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ನಿಷೇಧ ಹೇರಿತ್ತು. ನಿಷೇಧ ಹೇರಿದ ಬಳಿಕವೂ ಅನಧಿಕೃತವಾಗಿ ಓಡಾಡುತ್ತಿದ್ದ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆಯ ಆರ್‌ಟಿಓ ಅಧಿಕಾರಿಗಳು ಕ್ರಮಕೈಗೊಂಡಿದ್ದರು. ಇದರಿಂದ ಸಾವಿರಾರು ಸವಾರರು ಮತ್ತು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು.
ಇದರ ಬೆನ್ನಲ್ಲೇ, ಈ ನಿರ್ಧಾರವನ್ನು ಪ್ರಶ್ನಿಸಿ ಉಬರ್ ಹಾಗೂ ರ್ಯಾಪಿಡೋ ಮುಂತಾದ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿದ್ದವು. ವಿಚಾರಣೆ ವೇಳೆ, ಬೈಕ್ ಟ್ಯಾಕ್ಸಿ ಸೇವೆಯ ಕುರಿತಂತೆ ನಿಖರ ನೀತಿ ಚೌಕಟ್ಟು ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಜೊತೆಗೆ, ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ. ಅಂದರೆ, ಮುಂದಿನ ದಿನಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆಯ ಭವಿಷ್ಯವನ್ನು ನಿರ್ಧರಿಸುವಲ್ಲಿ ಸರ್ಕಾರದ ನೀತಿ ಮುಖ್ಯ ಪಾತ್ರ ವಹಿಸಲಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಬೆಂಗಳೂರಿನ ವ್ಯಾಪ್ತಿಯಲ್ಲೇ ಸುಮಾರು 1.20 ಲಕ್ಷ ಬೈಕ್‌ಗಳು ಟ್ಯಾಕ್ಸಿ ಸೇವೆಗೆ ನೋಂದಣಿ ಮಾಡಿಕೊಂಡಿವೆ. ಇನ್ನೂ ರಾಜ್ಯದಾದ್ಯಂತ 6 ಲಕ್ಷಕ್ಕೂ ಹೆಚ್ಚು ಸವಾರರು ಈ ಸೇವೆಗೆ ಅವಲಂಬಿತರಾಗಿದ್ದು, ತಮ್ಮ ಜೀವನೋಪಾಯವನ್ನು ಸಾಗಿಸುತ್ತಿದ್ದಾರೆ. ಕಳೆದ ಎರಡು ತಿಂಗಳ ನಿಷೇಧ ಅವಧಿಯಲ್ಲಿ ಈ ಸವಾರರು ಆರ್ಥಿಕ ತೊಂದರೆ ಅನುಭವಿಸಿದ್ದರು.
ಸೇವೆಯ ಪುನರ್‌ಆರಂಭದ ಬೆನ್ನಲ್ಲೇ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್ ಅವರು ಸಾರಿಗೆ ಸಚಿವರ ಭೇಟಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಹೈಕೋರ್ಟ್‌ನ ಆದೇಶದ ಪ್ರತಿಯನ್ನು ಅಧಿಕೃತವಾಗಿ ಇಲಾಖೆಗೆ ತಲುಪುತ್ತಿದ್ದಂತೆಯೇ, ಮುಂದೆ ಯಾವ ರೀತಿಯ ನಿಯಂತ್ರಣ ಮತ್ತು ಕ್ರಮಗಳನ್ನು ಜಾರಿಗೆ ತರಬೇಕು ಎಂಬ ಬಗ್ಗೆ ಇಲಾಖೆಯೊಳಗೆ ಚರ್ಚೆ ನಡೆಯಲಿದೆ. ಆದರೆ, ಈ ಕುರಿತು ಹಿರಿಯ ಅಧಿಕಾರಿಗಳು ಇನ್ನೂ ಮಾಧ್ಯಮಗಳಿಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ, ಬೈಕ್ ಟ್ಯಾಕ್ಸಿ ಸೇವೆ ಪ್ರಯಾಣಿಕರಿಗೆ ಮತ್ತೊಮ್ಮೆ ಲಭ್ಯವಾಗಿರುವುದರಿಂದ ಜನರಿಗೆ ಅನುಕೂಲವಾಗಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ, ಮುಂದಿನ ತಿಂಗಳಲ್ಲಿ ಸರ್ಕಾರವು ರೂಪಿಸುವ ನೀತಿ ಚೌಕಟ್ಟಿನ ಆಧಾರದ ಮೇಲೆ ಸೇವೆಯ ಭವಿಷ್ಯ ನಿರ್ಧರಿಸಲಾಗುವುದು.