ಹ್ಯಾಮಿಲ್ಟನ್: ಕೆನಡಾದ (Canada) ಒಂಟಾರಿಯೊ ಪ್ರಾಂತ್ಯದ ಹ್ಯಾಮಿಲ್ಟನ್ನಲ್ಲಿ (Hamilton) ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿನಿ (Indian Student) ದಾರುಣವಾಗಿ ಸಾವನ್ನಪ್ಪಿದ್ದಾಳೆ. ಈ ಘಟನೆಯಲ್ಲಿ ವಿದ್ಯಾರ್ಥಿನಿ ಆಕಸ್ಮಿಕವಾಗಿ ಗುಂಡಿಗೆ ಗುರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಹ್ಯಾಮಿಲ್ಟನ್ನ ಕಿಂಗ್ ಸ್ಟ್ರೀಟ್ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಈ ಗುಂಡಿನ ದಾಳಿಯಲ್ಲಿ ಮೊಹಾಕ್ ಕಾಲೇಜಿನಲ್ಲಿ ಓದಿತ್ತಿದ್ದ 22 ವರ್ಷದ ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧವಾಗೆ (Harsimrat Randhawa) ಗುಂಡು ತಗುಲಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಪ್ರಾಥಮಿಕ ತನಿಖೆಯಲ್ಲಿ ಕಪ್ಪು ಬಣ್ಣದ ಕಾರಿನ ಪ್ರಯಾಣಿಕನೊಬ್ಬ ಬಿಳಿ ಸೆಡಾನ್ ಕಾರಿನಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಎರಡೂ ವಾಹನಗಳು ಸ್ಥಳದಿಂದ ಹೊರಟುಹೋಯಿತು ಎಂದು ತಿಳಿದು ಬಂದಿದೆ. ಪೊಲೀಸರ ಪ್ರಕಾರ, ಈ ಗುಂಡಿನ ದಾಳಿಯು ಉದ್ದೇಶಿತ ಗುರಿಯಾಗಿರಲಿಲ್ಲ. ಘಟನೆಯ ಬಗ್ಗೆ ತನಿಖೆ ಆರಂಭವಾಗಿದ್ದು, ಶಂಕಿತರನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ತಂಡವೊಂದು ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಕೆನಡಾದ ಭಾರತೀಯ ದೂತಾವಾಸವು ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಸಂಪರ್ಕ ಸಾಧಿಸಿ ಸೂಕ್ತ ಸಹಾಯವನ್ನು ಒದಗಿಸುವುದಾಗಿ ತಿಳಿಸಿದೆ. ಈ ಘಟನೆಯಿಂದಾಗಿ ಕೆನಡಾದ ಭಾರತೀಯ ವಿದ್ಯಾರ್ಥಿ ಸಮುದಾಯದಲ್ಲಿ ಆತಂಕ ಮೂಡಿದ್ದು, ಸ್ಥಳೀಯ ಆಡಳಿತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸುವ ಭರವಸೆ ನೀಡಿದೆ.