ಪಾರ್ಕಿಂಗ್ ವಿಚಾರದ ಜಗಳ ವಿಕೋಪಕ್ಕೆ ತಿರುಗಿದ ದಾಳಿ
ಬೆಂಗಳೂರು, ಸೆಪ್ಟೆಂಬರ್ 27: ಪಾರ್ಕಿಂಗ್ ವಿಚಾರದಲ್ಲಿ ಆರಂಭವಾದ ಸಾಮಾನ್ಯ ವಾಗ್ವಾದವೇ ಕೊನೆಗೆ ವಿಕೋಪಕ್ಕೆ ತಿರುಗಿ ನಾಲ್ವರಿಗೆ ಚಾಕುವಿನಿಂದ ಗಾಯವಾದ ಘಟನೆ ಬೆಂಗಳೂರಿನ ಮಾರಗೊಂಡನಹಳ್ಳಿ ಆರ್.ಆರ್. ಲೇಔಟ್‌ನಲ್ಲಿ ನಡೆದಿದೆ. ಸೆಪ್ಟೆಂಬರ್ 24ರಂದು ನಡೆದಿದ್ದರೂ ಈ ಘಟನೆ ಇದೀಗ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ರಾತ್ರಿ 8.30ರ ಸುಮಾರಿಗೆ ಹೇಮಂತ್ ತಮ್ಮ ದೊಡ್ಡಪ್ಪ ರಮೇಶ್ ಜೊತೆ ಮನೆಯ ಮುಂಭಾಗ ಕುಳಿತಿದ್ದಾಗ ಸ್ಕಾರ್ಪಿಯೋ ಕಾರಿನಲ್ಲಿ ವೇಗವಾಗಿ ಬಂದ ವೆಂಕಟೇಶ್ ಎಂಬಾತ, ಮನೆ ಹತ್ತಿರದ ಮೋರಿಯ ಮೇಲೆ ವಾಹನ ಪಾರ್ಕ್ ಮಾಡಿದ್ದ. ಇದನ್ನು ಗಮನಿಸಿದ ಹೇಮಂತ್ “ಯಾಕೆ ಇಷ್ಟು ವೇಗವಾಗಿ ಬರುತ್ತೀರಿ?” ಎಂದು ಕೇಳಿದಾಗ ವೆಂಕಟೇಶ್ ಅವಾಚ್ಯ ಪದಗಳಿಂದ ನಿಂದಿಸಿ ಜಗಳ ಆರಂಭಿಸಿದ್ದಾನೆ.
ವಿವಾದ ತೀವ್ರಗೊಂಡಾಗ ರಮೇಶ್ ಮಧ್ಯಪ್ರವೇಶ ಮಾಡಿ ಪ್ರಶ್ನಿಸಿದಷ್ಟೇ ತಡ, ಕೋಪಗೊಂಡ ವೆಂಕಟೇಶ್ ತನ್ನ ಕಾರಿನಿಂದ ಚಾಕು ತೆಗೆದು ದಾಳಿ ನಡೆಸಿದ್ದಾನೆ. ಮೊದಲು ರಮೇಶ್ ಅವರ ಎಡ ತೊಡೆಗೆ ಇರಿದ ಪರಿಣಾಮ ಅವರು ಅಲ್ಲಿ ಕುಸಿದಿದ್ದಾರೆ. ಗಲಾಟೆ ನೋಡಿ ಮಧ್ಯ ಪ್ರವೇಶಿಸಿದ ರಮೇಶ್ ಪತ್ನಿ ಹನುಮಂತಮ್ಮ, ಹೇಮಂತ್ ಹಾಗೂ ಸ್ಥಳಕ್ಕೆ ಬಂದಿದ್ದ ಒಬ್ಬ ಅಪ್ರಾಪ್ತನ ಮೇಲೂ ವೆಂಕಟೇಶ್ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ಗಾಯಗೊಂಡ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಲಾಗಿದ್ದು, ಭಾಗ್ಯವಶಾತ್ ಪ್ರಾಣಾಪಾಯ ತಪ್ಪಿದೆ. ಸ್ಥಳೀಯರ ದೂರಿನ ಮೇರೆಗೆ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿ ವೆಂಕಟೇಶ್ ಬಂಧನಕ್ಕೊಳಗಾಗಿದ್ದಾನೆ. ಈ ಘಟನೆ ಸಮುದಾಯದಲ್ಲಿ ಆತಂಕವನ್ನು ಉಂಟುಮಾಡಿದ್ದು, ಪಾರ್ಕಿಂಗ್ ವಿಚಾರಕ್ಕೆ ಹೀಗೆ ತೀವ್ರ ಹಿಂಸೆಗೆ ಎಡೆಮಾಡಿಕೊಟ್ಟಿದ್ದೇನೋ ಎಂಬ ಪ್ರಶ್ನೆ ಎದ್ದಿದೆ.