ಭೀಮನ ಅಮಾವಾಸ್ಯೆ ದಿನವೇ ಗಂಡನನ್ನು ಕೊಂ* ಪತ್ನಿ

ಕೋಲಾರ: ಭೀಮನ ಅಮವಾಸ್ಯೆ ದಿನ ಗಂಡನಿಗೆ ಪೂಜೆ ಸಲ್ಲಿಸಬೇಕಿದ್ದ ಪತ್ನಿಯೇ ಆತನನ್ನು ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಚೆನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ಹಣಕಾಸಿನ ವಿಚಾರವಾಗಿ ದಂಪತಿ ನಡುವೆ ಉಂಟಾಗಿದ್ದ ಅಸಮಾಧಾನ ಕೊಲೆಯಲ್ಲಿ ಅಂತ್ಯವಾಗಿದ್ದು, ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದೆ.

ಮೃತ ವ್ಯಕ್ತಿಯನ್ನು ನಾರಾಯಣಸ್ವಾಮಿ (68) ಎಂದು ಗುರುತಿಸಲಾಗಿದ್ದು, ಹತ್ಯೆ ಆರೋಪ ಎದುರಿಸುತ್ತಿರುವ ಪತ್ನಿ ಜಗದಾಂಭ (58) ಎಂದು ತಿಳಿದುಬಂದಿದೆ. ದಂಪತಿ ನಡುವೆ ಹಲವು ದಿನಗಳಿಂದ ಮನಸ್ತಾಪವಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಆದರೆ ಕಳೆದ ಎರಡು-ಮೂರು ದಿನಗಳಿಂದ ಪತಿ ನಾರಾಯಣಸ್ವಾಮಿಯನ್ನು ಹಣದ ವಿಚಾರದಲ್ಲಿ ಪುಸಲಾಯಿಸಿದ ಜಗದಾಂಭ, ಅವರನ್ನು ತೋಟದ ಮನೆಗೆ ಕರೆದುಕೊಂಡು ಬಂದಿದ್ದಳು ಎನ್ನಲಾಗಿದೆ. ಭೀಮನ ಅಮವಾಸ್ಯೆಯ ರಾತ್ರಿ ಪತಿಗೆ ಊಟ ನೀಡುವ ವೇಳೆ ಅದರಲ್ಲಿ ಸುಮಾರು 10 ನಿದ್ರೆ ಮಾತ್ರೆಗಳನ್ನು ಹಾಕಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಊಟ ಸೇವಿಸಿದ ಬಳಿಕ ನಾರಾಯಣಸ್ವಾಮಿ ನಿದ್ರೆಗೆ ಜಾರಿದ ನಂತರ, ಜಗದಾಂಭ ಹಗ್ಗದಿಂದ ಅವರ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಕೃತ್ಯ ಎಸಗಿದ ಬಳಿಕ ಆಕೆ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.

ಹಣದ ವಿಚಾರವೇ ಕೊಲೆಗೆ ಕಾರಣ

ಪೊಲೀಸರು ವಿಚಾರಣೆ ನಡೆಸಿದ ವೇಳೆ, ಜಮೀನು ಮಾರಾಟದಿಂದ ಬಂದ ಹಣವನ್ನು ಪತಿ ತನ್ನ ಕೈಗೆ ನೀಡಿರಲಿಲ್ಲ ಎಂದು ಜಗದಾಂಭ ಆರೋಪಿಸಿದ್ದಾಳೆ. ಅಲ್ಲದೆ, ಉಳಿದ ಜಮೀನನ್ನೂ ನಾರಾಯಣಸ್ವಾಮಿ ಮಾರಾಟ ಮಾಡಬಹುದು ಎಂಬ ಆತಂಕದಿಂದ ಈ ಕೃತ್ಯ ಎಸಗಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ಹಣ ಹಾಗೂ ಜಮೀನು ಮಾರಾಟದ ವಿಚಾರವೇ ದಂಪತಿ ನಡುವಿನ ಮನಸ್ತಾಪಕ್ಕೆ ಪ್ರಮುಖ ಕಾರಣವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೊಲೆ ಪೂರ್ವಯೋಜಿತವಾಗಿತ್ತೇ ಅಥವಾ ಘಟನೆಗೆ ಬೇರೆ ಯಾವುದೇ ಕಾರಣಗಳಿವೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಸಂಪೂರ್ಣ ಹಿನ್ನೆಲೆ, ಹತ್ಯೆಗೆ ಬಳಸಿದ ವಸ್ತುಗಳು ಹಾಗೂ ಇತರ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *