“ಭೂ ಗ್ಯಾರಂಟಿ” ಘೋಷಣೆ: 7 ಲಕ್ಷ ಬಿ ಖಾತೆಗಳಿಗೆ ಎ ಖಾತೆ ಭಾಗ್ಯ

ಬೆಂಗಳೂರು: ಇ-ಖಾತಾ, ನಂಬಿಕೆ ನಕ್ಷೆ ಸೇರಿದಂತೆ ಬೆಂಗಳೂರಿನ ನಾಗರಿಕರ ಅನುಕೂಲಕ್ಕಾಗಿ ಈಗಾಗಲೇ ಹಲವು ಮಹತ್ವದ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಇದೀಗ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ D. K. Shivakumar ಅವರು ಬೆಂಗಳೂರಿನ ಜನತೆಗೆ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಭೂ ಗ್ಯಾರಂಟಿ” ನಮ್ಮ ಸರ್ಕಾರದ ಆರನೇ ಗ್ಯಾರಂಟಿ ಎಂದು ಘೋಷಿಸಿ, ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡಲು ವಿಶೇಷ ಅಭಿಯಾನ ಆರಂಭಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಮಹಾನಗರ ಪ್ರದೇಶದಲ್ಲಿ (GBA) ವ್ಯಾಪ್ತಿಗೆ ಬರುವ ಐದು ನಗರ ಪಾಲಿಕೆಗಳಲ್ಲಿ ಮೇ 16, 2026ರಿಂದ “ನನ್ನ ಖಾತಾ ನನ್ನ ಹಕ್ಕು” (e-Khatha Open House) ಅಭಿಯಾನ ಆರಂಭವಾಗಲಿದೆ. ಈ ಯೋಜನೆಯಡಿ ಬಿ ಖಾತೆ ಹೊಂದಿರುವ ಮನೆ ಮಾಲೀಕರು ತಮ್ಮ ಆಸ್ತಿಯನ್ನು ಎ ಖಾತೆಗೆ ಪರಿವರ್ತಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ನಗರದಲ್ಲಿ ಅನೇಕರು ಪ್ಲಾನ್ ಅನುಮತಿ ಇಲ್ಲದೆ ಮನೆಗಳನ್ನು ನಿರ್ಮಿಸಿಕೊಂಡಿರುವ ಕಾರಣ, ಅವರಿಗೆ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ ಹಾಗೂ ಇತರೆ ನಾಗರಿಕ ಸೌಲಭ್ಯಗಳನ್ನು ಪಡೆಯಲು ಹಲವು ವರ್ಷಗಳಿಂದ ಸಮಸ್ಯೆಗಳು ಎದುರಾಗುತ್ತಿವೆ. ಇಂತಹ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಈ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ಬಿ ಖಾತೆಗಳು ಇದ್ದು, ಅವುಗಳನ್ನು ಕಾನೂನುಬದ್ಧವಾಗಿ ಎ ಖಾತೆಗೆ ಪರಿವರ್ತಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಲಾ ಆವರಣ ಸೇರಿದಂತೆ 10 ಸ್ಥಳಗಳನ್ನು ಗುರುತಿಸಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಮೇ 16ರ ನಂತರ ಪ್ರತೀ ಶನಿವಾರ ಈ ಅಭಿಯಾನ ನಡೆಯಲಿದ್ದು, ಅಧಿಕಾರಿಗಳು ರಜೆ ಇದ್ದರೂ ಜನರ ಕೆಲಸಗಳನ್ನು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಲಾಗಿದೆ.

ಇದಲ್ಲದೆ, ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡಿಕೊಂಡವರಿಗೆ ಮತ್ತೊಂದು ದೊಡ್ಡ ಸೌಲಭ್ಯವನ್ನೂ ಸರ್ಕಾರ ಘೋಷಿಸಿದೆ. ಇದುವರೆಗೆ ಗೈಡೆನ್ಸ್ ವ್ಯಾಲ್ಯೂ ಆಧಾರಿತ ಶುಲ್ಕ ಶೇಕಡಾ 5ರಷ್ಟಿದ್ದರೆ, ಇದೀಗ ಅದನ್ನು ಶೇಕಡಾ 2ಕ್ಕೆ ಇಳಿಕೆ ಮಾಡಲಾಗಿದೆ. ಜನರು ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಆಸ್ತಿ ಪ್ರಮಾಣಪತ್ರವನ್ನು ನೇರವಾಗಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಈ ವಿಶೇಷ ಅವಕಾಶವನ್ನು ಮುಂದಿನ 100 ದಿನಗಳೊಳಗೆ ನಾಗರಿಕರು ಬಳಸಿಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

ಇದೇ ವೇಳೆ ಬೆಂಗಳೂರನ್ನು ಹಸಿರು ನಗರವನ್ನಾಗಿಸುವ ದಿಸೆಯಲ್ಲಿ “ಗ್ರೀನ್ ಬೆಂಗಳೂರು” ಕಾರ್ಯಕ್ರಮವನ್ನೂ ಘೋಷಿಸಲಾಗಿದೆ. ಕೆಂಪೇಗೌಡ ಜಯಂತಿಯ ಅಂಗವಾಗಿ ಜೂನ್ 27ರಂದು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಆ ದಿನ ಬೆಂಗಳೂರಿನಾದ್ಯಂತ 15 ಲಕ್ಷ ಸಸಿಗಳನ್ನು ನೆಡುವ ಗುರಿ ಇಡಲಾಗಿದೆ. ಬಿಡಿಎಗೆ 50 ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದ್ದಾರೆ.

ನಗರದ ಅಭಿವೃದ್ಧಿ ಕುರಿತಾಗಿ ಮತ್ತೊಂದು ಮಹತ್ವದ ಯೋಜನೆಯನ್ನೂ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆಯವರೆಗೆ ಸುಮಾರು 33 ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಿಸಿನೆಸ್ ಕಾರಿಡಾರ್ ನಿರ್ಮಾಣ ಮಾಡುವ ಯೋಜನೆ ಸರ್ಕಾರದ ಮುಂದಿದೆ ಎಂದು ಹೇಳಿದ್ದಾರೆ. ಈ ಯೋಜನೆಗಾಗಿ ಭೂಮಿ ನೀಡುವ ಮಾಲೀಕರಿಗೆ ಐದು ರೀತಿಯ ಪರಿಹಾರ ಮಾದರಿಗಳನ್ನು ನೀಡಲಾಗುವುದು. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಡಿನೋಟಿಫೈ ಮಾಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ, ಬಿ ಖಾತೆ ಸಮಸ್ಯೆಗೆ ಶಾಶ್ವತ ಪರಿಹಾರ, ಎ ಖಾತೆ ಸೌಲಭ್ಯ, ಕಡಿತಗೊಂಡ ಗೈಡೆನ್ಸ್ ವ್ಯಾಲ್ಯೂ, ಗ್ರೀನ್ ಬೆಂಗಳೂರು ಅಭಿಯಾನ ಹಾಗೂ ಬಿಸಿನೆಸ್ ಕಾರಿಡಾರ್ ಯೋಜನೆಗಳ ಮೂಲಕ ಬೆಂಗಳೂರಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೊಸ ದಿಕ್ಕು ನೀಡುತ್ತಿದೆ ಎಂಬ ಸಂದೇಶವನ್ನು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *