ಬಿರು ಬಿಸಿಲಿನ ತೀವ್ರ ಝಳಕ್ಕೆ ಬೀದರ್ ಜಿಲ್ಲೆಯಲ್ಲಿ 20 ವರ್ಷದ ಯುವಕ ಮೃತಪಟ್ಟಿರುವ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನ ಜನಜೀವನದ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆ, ಈ ಘಟನೆ ಆತಂಕವನ್ನು ಹೆಚ್ಚಿಸಿದೆ.
ಮೃತ ಯುವಕನು ಉತ್ತರ ಪ್ರದೇಶ ಮೂಲದ ಮಹ್ಮದ್ ಸಮೀರ್ (20), ತಂದೆ ಲಯಿಕ್ ಅಹ್ಮದ್ ಎಂದು ಗುರುತಿಸಲಾಗಿದೆ. ಕೆಲಸದ ನಿಮಿತ್ತವಾಗಿ ಇದೇ ತಿಂಗಳ 12ನೇ ತಾರೀಖಿನಂದು ಕಮಲನಗರ ಪಟ್ಟಣಕ್ಕೆ ಬಂದಿದ್ದ ಆತ, 14ನೇ ತಾರೀಖಿನಂದು ತರಕಾರಿ ತರಲು ಹೊರಟು ನಂತರ ನಾಪತ್ತೆಯಾಗಿದ್ದ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬಿಸಿಲಿನ ತಾಪಮಾನ ತಾಳಲಾರದೇ ಯುವಕನಿಗೆ ತಲೆ ಸುತ್ತಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಡಿಗ್ಗಿ-ಕಮಲನಗರ ರಸ್ತೆಯ ಮಧ್ಯದಲ್ಲಿ ಕುಸಿದು ಬಿದ್ದಿದ್ದಾನೆ. ಘಟನೆ ಸಂಭವಿಸುವ ಮುನ್ನ ಆತ ಸಮೀಪದ ಮೆಕಾನಿಕ್ ಅಂಗಡಿಯ ಬಳಿ ನೀರು ಕುಡಿದಿದ್ದಾನೆ ಎನ್ನಲಾಗಿದೆ. ತಲೆ ಸುತ್ತುತ್ತಿದೆ ಎಂದು ಹೇಳಿ ಕೆಲ ಹೊತ್ತು ವಿಶ್ರಾಂತಿ ಪಡೆದು, ನಂತರ ಡಿಗ್ಗಿ ಗ್ರಾಮದ ಕಡೆ ಪ್ರಯಾಣ ಮುಂದುವರಿಸಿದಾಗಲೇ ಮಧ್ಯದಲ್ಲೇ ಕುಸಿದು ಬಿದ್ದಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಘಟನೆ ರಾಷ್ಟ್ರೀಯ ಹೆದ್ದಾರಿ-50 ಸಮೀಪ, ಡಿಗ್ಗಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ನಡೆದಿರುವುದು ತಿಳಿದುಬಂದಿದೆ. ಬಿಸಿಲಿನ ತೀವ್ರತೆಯಿಂದಲೇ ಯುವಕ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಕಮಲನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಪಿಐ ಶ್ರೀಕಾಂತ ಅಲ್ಲಾಪುರೆ ಹಾಗೂ ಪಿಎಸ್‍ಐ ಆಶಾ ರಾಠೋಡ್ ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಯುವಕನ ತಂದೆ ಲಯಿಕ್ ಅಹ್ಮದ್ ನೀಡಿದ ದೂರಿನ ಮೇರೆಗೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 14ನೇ ತಾರೀಖಿನಿಂದ ನಾಪತ್ತೆಯಾಗಿದ್ದ ಯುವಕನ ಶವ ನಿನ್ನೆ ಪತ್ತೆಯಾಗಿದ್ದು, ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆ, ಇದು ಈ ವರ್ಷ ಬಿಸಿಲಿನ ಝಳಕ್ಕೆ ಸಂಭವಿಸಿದ ಮೊದಲ ಬಲಿಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಘಟನೆ ಜನರಲ್ಲಿ ಆತಂಕ ಮೂಡಿಸಿದ್ದು, ಬಿಸಿಲಿನ ವೇಳೆ ಹೊರಗೆ ಹೋಗುವಾಗ ಹೆಚ್ಚಿನ ಜಾಗ್ರತೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
