ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಅದರ ಪ್ರಭಾವ ಇದೀಗ ದೇಶದ ಅಡುಗೆ ಮನೆಗಳವರೆಗೂ ತಲುಪಿದೆ. ಕಳೆದ ಒಂದು ವಾರದಿಂದ ಯಾವುದೇ ದೊಡ್ಡ ಘೋಷಣೆ ಇಲ್ಲದೆ ಅಡುಗೆ ಎಣ್ಣೆಯ ಬೆಲೆ ನಿಧಾನವಾಗಿ ಏರಿಕೆಯಾಗುತ್ತಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಇದೇ ವೇಳೆ ಹಿಂದುಗಳ ಪ್ರಮುಖ ಹಬ್ಬವಾದ ಯುಗಾದಿ ಹಾಗೂ ಮುಸ್ಲಿಮರ ಪವಿತ್ರ ರಂಜಾನ್ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆ ಈ ಬೆಲೆ ಏರಿಕೆ ಮನೆಮಂದಿಯ ಖರ್ಚಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಮಾರುಕಟ್ಟೆ ಮೂಲಗಳ ಪ್ರಕಾರ, ಕಳೆದ ವಾರಕ್ಕೆ ಹೋಲಿಸಿದರೆ ಪ್ರಮುಖ ಬ್ರ್ಯಾಂಡ್‌ಗಳ ಅಡುಗೆ ಎಣ್ಣೆಯ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಸರಾಸರಿ ₹4 ರಿಂದ ₹5 ರಷ್ಟು ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಕಾಣಿಸುತ್ತಿರುವ ಈ ಏರಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರ ವಲಯಗಳು ತಿಳಿಸಿವೆ.
ಪ್ರಮುಖ ಬ್ರ್ಯಾಂಡ್‌ಗಳಲ್ಲೂ ಬೆಲೆ ಏರಿಕೆ
ಮಾರುಕಟ್ಟೆಯಲ್ಲಿ ಹೆಚ್ಚು ಬಳಕೆಯಾಗುವ ಹಲವು ಅಡುಗೆ ಎಣ್ಣೆ ಬ್ರ್ಯಾಂಡ್‌ಗಳಲ್ಲೂ ಬೆಲೆ ಏರಿಕೆ ದಾಖಲಾಗಿದೆ. ಜನಪ್ರಿಯ ಬ್ರ್ಯಾಂಡ್ ಆಗಿರುವ ಗೋಲ್ಡ್ ವಿನ್ನರ್ (Gold Winner) ಎಣ್ಣೆಯ ಬೆಲೆ ಕಳೆದ ವಾರ ಲೀಟರ್‌ಗೆ ₹161 ಇದ್ದರೆ, ಈಗ ಅದು ₹165ಕ್ಕೆ ಏರಿಕೆಯಾಗಿದೆ. ಅದೇ ರೀತಿ ಸನ್‌ಪ್ಯೂರ್ (Sunpure) ಎಣ್ಣೆಯ ಬೆಲೆಯಲ್ಲೂ ಇದೇ ರೀತಿಯ ಏರಿಕೆ ಕಂಡುಬಂದಿದ್ದು ₹161ರಿಂದ ₹165ಕ್ಕೆ ತಲುಪಿದೆ.
ಇನ್ನೊಂದೆಡೆ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ದೊರೆಯುತ್ತಿದ್ದ ಫಾರ್ಚೂನ್ (Fortune) ಬ್ರ್ಯಾಂಡ್‌ನಲ್ಲೂ ಬೆಲೆ ಏರಿಕೆ ಕಂಡುಬಂದಿದೆ. ಕಳೆದ ವಾರ ₹152 ಇದ್ದ ಒಂದು ಲೀಟರ್ ಎಣ್ಣೆಯ ಬೆಲೆ ಈಗ ₹157ಕ್ಕೆ ಏರಿಕೆಯಾಗಿದೆ. ಇತರ ಹಲವು ಬ್ರ್ಯಾಂಡ್‌ಗಳಲ್ಲೂ ಸರಾಸರಿ ₹4 ರಿಂದ ₹5 ರಷ್ಟು ಹೆಚ್ಚಳ ಕಂಡುಬಂದಿದೆ.
ಮುಂದಿನ ವಾರ ಮತ್ತಷ್ಟು ಏರಿಕೆ ಸಾಧ್ಯತೆ
ವ್ಯಾಪಾರ ವಲಯಗಳ ಮಾಹಿತಿಯ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಣ್ಣೆ ಬೀಜಗಳ ಬೆಲೆ ಹಾಗೂ ಸಾಗಣೆ ವೆಚ್ಚಗಳು ಯುದ್ಧದ ಪರಿಣಾಮದಿಂದ ಅಸ್ಥಿರವಾಗಿವೆ. ಈ ಪರಿಸ್ಥಿತಿ ಮುಂದುವರಿದರೆ ಮುಂದಿನ ವಾರದಲ್ಲಿ ಅಡುಗೆ ಎಣ್ಣೆಯ ಬೆಲೆ ಲೀಟರ್‌ಗೆ ₹10 ರಿಂದ ₹15 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಹಬ್ಬಗಳ ಸಮಯದಲ್ಲಿ ಗ್ರಾಹಕರಿಗೆ ಹೆಚ್ಚುವರಿ ಹೊರೆ
ಯುಗಾದಿ ಮತ್ತು ರಂಜಾನ್ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮನೆಗಳಲ್ಲಿ ವಿಶೇಷ ಅಡುಗೆಗಳ ಸಿದ್ಧತೆ ಆರಂಭವಾಗುತ್ತದೆ. ಈ ಸಮಯದಲ್ಲಿ ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ರಾಹಕರಿಗೆ ಹೆಚ್ಚುವರಿ ಹೊರೆ ಆಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
