ನೆಲಮಂಗ : ಅಸಲಿ ಉಂಗುರ ಬದಲು ನಕಲಿ ಇಟ್ಟು 3 ಲಕ್ಷ ರೂ. ಚಿನ್ನ ಕದ್ದ ಕದೀಮರು!

ನೆಲಮಂಗಲ: ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆ ಜ್ಯುವೆಲರಿ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ನಾಗಸಂದ್ರದಲ್ಲಿರುವ ಪೂರನ್ ಜ್ಯುವೆಲರ್ಸ್ ಅಂಗಡಿಯಲ್ಲಿ ಚಿನ್ನ ಕಳವು ನಡೆದ ಘಟನೆ ಬೆಳಕಿಗೆ ಬಂದಿದೆ. ಚಿನ್ನ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಕಳ್ಳನು ಅಟೆಂಶನ್ ಡೈವರ್ಶನ್ ತಂತ್ರ ಬಳಸಿ ಸುಮಾರು 3 ಲಕ್ಷ ರೂ. ಮೌಲ್ಯದ 18 ಗ್ರಾಂ ಚಿನ್ನಾಭರಣ ಕಳವು ಮಾಡಿರುವುದು ವರದಿಯಾಗಿದೆ.

ಮಾಹಿತಿ ಪ್ರಕಾರ, ಮಹೇಂದ್ರ ಅವರ ಮಾಲಿಕತ್ವದ ಈ ಜ್ಯುವೆಲರಿ ಅಂಗಡಿಗೆ ಬಂದ ಕಳ್ಳನು ಉಂಗುರ ಖರೀದಿಸುವುದಾಗಿ ಹೇಳಿ ವಿವಿಧ ಮಾದರಿಗಳನ್ನು ತೋರಿಸುವಂತೆ ಸಿಬ್ಬಂದಿಯನ್ನು ಕೇಳಿದ್ದಾನೆ. ಬಳಿಕ ಉಂಗುರದ ತೂಕವನ್ನು ತೋರಿಸುವಂತೆ ಹೇಳಿ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ನಡೆಸಿದ್ದಾನೆ. ಈ ವೇಳೆ ಅಸಲಿ ಚಿನ್ನದ ಉಂಗುರವನ್ನು ಚಾತುರ್ಯದಿಂದ ತನ್ನ ಬಳಿ ಇಟ್ಟುಕೊಂಡು, ಅದರ ಬದಲಿಗೆ ನಕಲಿ ಉಂಗುರವನ್ನು ಟ್ರೇಯಲ್ಲಿ ಇರಿಸಿ ಅನುಮಾನ ಮೂಡದಂತೆ ವರ್ತಿಸಿ ಅಂಗಡಿಯಿಂದ ಪರಾರಿಯಾಗಿದ್ದಾನೆ.

ಘಟನೆಯ ನಂತರ ಉಂಗುರವನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿ ಅಂಗಡಿ ಮಾಲೀಕರು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳನ ಕೈಚಳ ಸ್ಪಷ್ಟವಾಗಿ ಸೆರೆಯಾಗಿರುವುದು ತಿಳಿದುಬಂದಿದೆ. ಸಿಸಿಟಿವಿಯಲ್ಲಿ ಕಾಣಿಸಿದ ದೃಶ್ಯಗಳ ಆಧಾರದ ಮೇಲೆ ಆರೋಪಿಯ ಗುರುತು ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಕುರಿತು ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಕಳ್ಳತನ ನಡೆಸಿದ ವ್ಯಕ್ತಿಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರಿಸಲಾಗಿದೆ. ಇಂತಹ ಅಟೆಂಶನ್ ಡೈವರ್ಶನ್ ಕಳ್ಳತನಗಳಿಂದ ಎಚ್ಚರಿಕೆಯಿಂದಿರಲು ಜ್ಯುವೆಲರಿ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಗೆ ಪೊಲೀಸರು ಸಲಹೆ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *