ನೆಲಮಂಗಲ: ನಗರದ ಪೇಟೆ ಬೀದಿಯಲ್ಲಿ ವೃದ್ಧ ಮಹಿಳೆಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಶೋಭಾ (69) ಎಂದು ಗುರುತಿಸಲಾಗಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮಾಹಿತಿಯ ಪ್ರಕಾರ, ಶೋಭಾ ಹಾಗೂ ಅವರ ಪತಿ ರಂಗನಾಥ್ ಇಬ್ಬರೂ ಮನೆಯಲ್ಲಿದ್ದ ವೇಳೆ ಈ ದುರ್ಘಟನೆ ನಡೆದಿದೆ. ವಯೋಸಹಜ ಕಾರಣಗಳಿಂದ ರಂಗನಾಥ್ ವೀಲ್‌ಚೇರ್‌ನಲ್ಲಿ ಇದ್ದು, ನಡೆದ ಘಟನೆಗೆ ಪ್ರತಿರೋಧಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಈ ದುರ್ಬಲ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ದುಷ್ಕರ್ಮಿಗಳು ಮನೆಗೆ ನುಗ್ಗಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಇದನ್ನು ನೋಡಿ : https://www.facebook.com/reel/899644962691067
ದುಷ್ಕರ್ಮಿಗಳು ಶೋಭಾಳ ತಲೆಗೆ ಹೊಡೆದು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಮನೆಯಲ್ಲಿ ಇದ್ದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಸಾಧ್ಯತೆ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಮನೆಯೊಳಗಿನ ವಸ್ತುಗಳ ಸ್ಥಿತಿಗತಿ ಪರಿಶೀಲಿಸಿದಾಗ ಕಳ್ಳತನದ ಉದ್ದೇಶದಿಂದಲೇ ಈ ಕೃತ್ಯ ನಡೆದಿರಬಹುದು ಎಂಬ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಈ ಘಟನೆ ಸ್ಥಳೀಯ ನಿವಾಸಿಗಳನ್ನು ಬೆಚ್ಚಿಬೀಳಿಸಿದ್ದು, ಹಿರಿಯ ನಾಗರಿಕರ ಸುರಕ್ಷತೆ ಕುರಿತು ಆತಂಕ ಹೆಚ್ಚಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.
