ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಯುವ ಜೋಡಿಗೆ ಮನೆಯವರಿಂದ ಬಂದ ಪ್ರತಿಕ್ರಿಯೆ ಆಘಾತಕಾರಿ ಘಟನೆಯಾಗಿದೆ. ಚಿಂತಾಮಣಿ ತಾಲ್ಲೂಕಿನ ಗೋಪಳ್ಳಿ ಗ್ರಾಮದ 23 ವರ್ಷದ ನಿತಿನ್ ಹಾಗೂ 19 ವರ್ಷದ ಸುಕನ್ಯಾ ಕಳೆದ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿ ದೇವಾಲಯವೊಂದರಲ್ಲಿ ಪರಸ್ಪರ ಪ್ರೀತಿಯಿಂದ ಮದುವೆಯಾಗಿದ್ದರು. ಮದುವೆಯಾದ ನಂತರ ಇಬ್ಬರೂ ತಮ್ಮ ಕುಟುಂಬದವರ ಕ್ಷಮೆ ಹಾಗೂ ಆಶೀರ್ವಾದಕ್ಕಾಗಿ ಮನೆಗೆ ವಾಪಸ್ಸಾದಾಗ ಅನಿರೀಕ್ಷಿತ ಘಟನೆ ನಡೆದಿದೆ.
ಯುವಕನ ಮನೆಯವರು ನಿತಿನ್ ಮತ್ತು ಸುಕನ್ಯಾ ವರಸೆಯ ಹಿನ್ನಲೆಯಲ್ಲಿ ಅಣ್ಣ-ತಂಗಿಯ ಸಂಬಂಧದಲ್ಲಿದ್ದಾರೆಂದು ಹೇಳಿ ಮದುವೆಯನ್ನು ಒಪ್ಪಲಿಲ್ಲ. “ನೀವಿಬ್ಬರು ಅಣ್ಣ-ತಂಗಿ ಆಗಬೇಕು, ನಿಮ್ಮ ಮದುವೆ ಸರಿ ಅಲ್ಲ, ಸಂಬಂಧಿಕರು ಬೈಕೊಳ್ಳುತ್ತಾರೆ” ಎಂದು ಹಿರಿಯರು ತೀವ್ರ ವಿರೋಧ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ.
ಕುಟುಂಬದ ಈ ತಿರಸ್ಕಾರದಿಂದ ಮನನೊಂದು ಬೇಸರಗೊಂಡ ಸುಕನ್ಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಚಿಂತಾಮಣಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಆಕೆಯ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ದಾಖಲಾಗಿದ್ದರೂ ಸುಕನ್ಯಾ “ನನಗೆ ಅದೇ ಯುವಕ ಬೇಕು, ನಿತಿನ್ ಜೊತೆಯಲ್ಲೇ ಬದುಕುತ್ತೇನೆ” ಎಂದು ಪಟ್ಟು ಹಿಡಿದಿದ್ದಾಳೆ.
ಈ ಘಟನೆ ಪ್ರೀತಿಯ ಹೆಸರಿನಲ್ಲಿ ನಡೆದ ಸಾಮಾಜಿಕ ವಿವಾದದ ಹೊಸ ಉದಾಹರಣೆಯಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಗಮನ ಸೆಳೆದಿದೆ.
