ಚಾಮರಾಜನಗರ, ನವೆಂಬರ್ 04: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ನೆಲೆಸಿರುವ ಖಾಸಗಿ ವಾಕ್ ಮತ್ತು ಶ್ರವಣ (Speech and Hearing) ಶಾಲೆಯೊಂದರಲ್ಲಿ ನಡೆದಿರುವ ನಾಚಿಕೆಗೇಡಿತನದ ಘಟನೆ ಇದೀಗ ಬಹಿರಂಗವಾಗಿ ಹೊರಬಿದ್ದಿದೆ. ಸುಮಾರು 13 ವರ್ಷಗಳ ಹಿಂದೆಯೇ ನಡೆದಿದ್ದರೂ, ಈ ವಿಷಯ ಇದೀಗ ಬೆಳಕಿಗೆ ಬಂದಿದ್ದು ಜಿಲ್ಲೆಯಾದ್ಯಂತ ಆಘಾತ ಮತ್ತು ಆಕ್ರೋಶ ಉಂಟುಮಾಡಿದೆ.
ಮಾಹಿತಿ ಪ್ರಕಾರ, 2012-13ನೇ ಸಾಲಿನಲ್ಲಿ ಕೊಳ್ಳೇಗಾಲದ ಖಾಸಗಿ ವಾಕ್ ಮತ್ತು ಶ್ರವಣ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಶೇಷ ಚೇತನ ವಿದ್ಯಾರ್ಥಿನಿ (speech impaired student) ಮೇಲೆ ಅಲ್ಲಿನ ಶಿಕ್ಷಕರೊಬ್ಬರು ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ವಿದ್ಯಾರ್ಥಿನಿಗೆ ಮಾತನಾಡುವ ಸಾಮರ್ಥ್ಯ ಇರದಿದ್ದುದರಿಂದ ಅದನ್ನು ದುರುಪಯೋಗಪಡಿಸಿಕೊಂಡ ಶಿಕ್ಷಕ, ನಿರಂತರವಾಗಿ ಕಿರುಕುಳ ನೀಡಿದ್ದಾನೆ ಎಂಬುದು ಆರೋಪ. ಈ ಬಗ್ಗೆ ವಿದ್ಯಾರ್ಥಿನಿ ಆಗ ಆಪ್ತರಿಗೆ ಹೇಳಲು ಸಾಧ್ಯವಾಗದೆ ಮೌನ ವಹಿಸಿದ್ದಾಳೆ.
ಆದರೆ ಇತ್ತೀಚೆಗೆ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ (Alumni Meet) ಸಭೆ ನಡೆದ ಸಂದರ್ಭದಲ್ಲಿ, ಸಂತ್ರಸ್ತೆ ಮನಸ್ಸು ತಡೆಯಲಾಗದೆ ತನ್ನ ಬಾಲ್ಯದಲ್ಲಿ ನಡೆದ ಈ ಪೀಡನೆಯ ಕುರಿತ ವಿವರವನ್ನು ಎಲ್ಲರ ಮುಂದೆಯೂ ಬಿಚ್ಚಿಟ್ಟಿದ್ದಾಳೆ. ಈ ಮೂಲಕ ವರ್ಷಗಳ ಕಾಲ ಮುಚ್ಚಿಟ್ಟಿದ್ದ ಕೃತ್ಯ ಇದೀಗ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ, ಶಾಲೆಯ ಸಿಇಒ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದು, ಪೊಲೀಸರು ಶಿಕ್ಷಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆಯ ಕಾಯ್ದೆ (POCSO Act) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಪ್ರಕರಣ ದಾಖಲಾದ ದಿನಾಂಕ ಅಕ್ಟೋಬರ್ 30 ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆ ಮುಂದುವರೆಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ತಿಳಿಸಿದ್ದಾರೆ.
ಈ ಘಟನೆಯು ಶಿಕ್ಷಕ-ವಿದ್ಯಾರ್ಥಿ ನಂಬಿಕೆಯ ಬಂಧವನ್ನು ಮುರಿದಂತಾಗಿದೆ ಎಂದು ಸ್ಥಳೀಯರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ವಿಶೇಷ ಚೇತನ ಮಕ್ಕಳ ಮೇಲಿನ ಇಂತಹ ಕೃತ್ಯಗಳು ಮಾನವೀಯ ಮೌಲ್ಯಗಳೇ ಕುಸಿಯುತ್ತಿರುವುದಕ್ಕೆ ಉದಾಹರಣೆ ಎಂದು ಸಾಮಾಜಿಕ ಸಂಘಟನೆಗಳು ಮತ್ತು ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ
