ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ – ಒಂಬತ್ತು ಭಕ್ತರ ಸಾವು

ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾಲ್ತುಳಿತ – ಒಂಬತ್ತು ಭಕ್ತರ ಸಾವು

ಕರ್ನೂಲ್ ಬಸ್ ದುರಂತದ ಕಹಿ ನೆನಪು ಮಾಸುವ ಮುನ್ನವೇ ಆಂಧ್ರ ಪ್ರದೇಶ ಮತ್ತೆ ಭೀಕರ ದುರಂತವನ್ನು ಎದುರಿಸಿದೆ. ಶ್ರೀಕಾಕುಳಂ ಜಿಲ್ಲೆಯ ಕಾಶಿಬುಗ್ಗ ಪಟ್ಟಣದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆ ನಡೆದ ಕಾಲ್ತುಳಿತದಲ್ಲಿ ಕನಿಷ್ಠ ಒಂಬತ್ತು ಭಕ್ತರು ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಕಾರ್ತಿಕ ಮಾಸದ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಗೆ ಸಾವಿರಾರು ಭಕ್ತರು ಆಗಮಿಸಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಕಚೇರಿ ಪ್ರಕಟಿಸಿದೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.

ಘಟನೆಯ ವಿವರ

ಕಾರ್ತಿಕ ಏಕಾದಶಿಯ ದಿನವನ್ನು ಅತ್ಯಂತ ಪವಿತ್ರ ದಿನವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ಕಾಶಿಬುಗ್ಗದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಹರಿದು ಬಂದಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ ದೇವಾಲಯದ ಪ್ರವೇಶದ್ವಾರದಲ್ಲಿ ಜನಸಂದಣಿ ಏಕಾಏಕಿ ಹೆಚ್ಚಾಗಿ ಒತ್ತಡ ಉಂಟಾದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿ, ಕೆಲವರು ಕಾಲುಜಾರಿ ಬಿದ್ದಿದ್ದು, ನಂತರ ಕಾಲ್ತುಳಿತ ಸಂಭವಿಸಿದೆ. ಕ್ಷಣಾರ್ಧದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿ ಹಲವರು ನೆಲಕ್ಕುರುಳಿದರು. ಸಾಕ್ಷಿದಾರರ ಪ್ರಕಾರ, ಜನಸಂದಣಿ ನಿಯಂತ್ರಣದ ಕೊರತೆ ಮತ್ತು ಕಿರಿದಾದ ದಾರಿಗಳೇ ದುರಂತಕ್ಕೆ ಕಾರಣವಾಗಿವೆ.

ತುರ್ತು ರಕ್ಷಣಾ ಕಾರ್ಯಾಚರಣೆ

ಘಟನೆ ನಡೆದ ಕೂಡಲೇ ಪೊಲೀಸರು, ಅಗ್ನಿಶಾಮಕ ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಗಾಯಗೊಂಡ ಭಕ್ತರನ್ನು ಸಮೀಪದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಕೃಷಿ ಸಚಿವ ಕೆ. ಅಚ್ಚನ್ನಾಯ್ಡು ಅವರು ಸ್ಥಳಕ್ಕೆ ತೆರಳಿ ದೇವಾಲಯದ ಆಡಳಿತ ಮಂಡಳಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಜನಸಂದಣಿಯನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸಂತಾ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಘಟನೆಯನ್ನು ಕುರಿತು ಆಳವಾದ ದುಃಖ ವ್ಯಕ್ತಪಡಿಸಿದ್ದಾರೆ.

“ಕಾಶಿಬುಗ್ಗದ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತವು ಹೃದಯವಿದ್ರಾವಕ ಘಟನೆ. ಮೃತ ಭಕ್ತರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರಿಗೆ ತಕ್ಷಣ ಮತ್ತು ಸಮರ್ಪಕ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಸ್ಥಳೀಯ ಆಡಳಿತ ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಬೇಕು” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವಾಲಯದ ಆಡಳಿತದ ನಿರ್ಲಕ್ಷ್ಯ ಆರೋಪ

ಆಂಧ್ರ ಪ್ರದೇಶ ಮುಜರಾಯಿ ಇಲಾಖೆಯ ಪ್ರಕಾರ ಕಾಶಿಬುಗ್ಗ ಶ್ರೀ ವೆಂಕಟೇಶ್ವರ ದೇವಸ್ಥಾನ ಸರ್ಕಾರಕ್ಕೆ ಸೇರಿದ ದೇವಾಲಯವಲ್ಲ. ದೇವಾಲಯದ ಆಡಳಿತ ಮಂಡಳಿಯು ಕಾರ್ತಿಕ ಏಕಾದಶಿಯಂದು ಹೆಚ್ಚಿನ ಭಕ್ತರು ಆಗಮಿಸುವ ಸಾಧ್ಯತೆ ಬಗ್ಗೆ ಮುಂಚಿತ ಮಾಹಿತಿ ನೀಡಿರಲಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಭದ್ರತಾ ವ್ಯವಸ್ಥೆಯ ಕೊರತೆ ಮತ್ತು ನಿರ್ಲಕ್ಷ್ಯದಿಂದಲೇ ದುರಂತ ಸಂಭವಿಸಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.

‘ಪುಟ್ಟ ತಿರುಪತಿ’ ಎಂದೇ ಖ್ಯಾತ ಕಾಶಿಬುಗ್ಗ ದೇಗುಲ

ಉತ್ತರ ಆಂಧ್ರದ ಪ್ರಸಿದ್ಧ ಧಾರ್ಮಿಕ ತಾಣವಾದ ಕಾಶಿಬುಗ್ಗ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನವು ಸುಮಾರು ಐದು ಎಕರೆ ಪ್ರದೇಶದಲ್ಲಿ ವಿಸ್ತರಿಸಿದೆ. ಸ್ಥಳೀಯರು ಇದನ್ನು ‘ಪುಟ್ಟ ತಿರುಪತಿ’ ಎಂದೇ ಕರೆಯುತ್ತಾರೆ. ಈ ದೇವಾಲಯವನ್ನು ಹರಿ ಮುಕುಂದ ಪಾಂಡ ಎಂಬ ಭಕ್ತ ತಿರುಮಲ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಿದ್ದಾರೆ. ತಿರುಮಲ ದೇಗುಲದ ಧಾರ್ಮಿಕ ಪ್ರೇರಣೆ ಹಾಗೂ ವಿನ್ಯಾಸವನ್ನು ಆಧರಿಸಿ, ಸ್ಥಳೀಯ ಭಕ್ತರಿಗೆ ಅದೇ ಅನುಭವ ನೀಡುವ ಉದ್ದೇಶದಿಂದ ಈ ದೇಗುಲ ನಿರ್ಮಿಸಲಾಯಿತು. ದೇವಾಲಯದ ನಿರ್ಮಾಣ ಕೇವಲ ಒಂದು ವರ್ಷದ ಹಿಂದಷ್ಟೇ ಪೂರ್ಣಗೊಂಡಿದ್ದು, ಪ್ರಸ್ತುತ ಹರಿ ಮುಕುಂದ ಪಾಂಡ ಅವರ ಮೇಲ್ವಿಚಾರಣೆಯಲ್ಲೇ ದೇವಾಲಯದ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ.

ತನಿಖೆ ಮತ್ತು ಪರಿಹಾರ ಕ್ರಮಗಳ

ಜಿಲ್ಲಾ ಆಡಳಿತವು ಘಟನೆಯ ಕುರಿತು ವಿಸ್ತೃತ ತನಿಖೆ ಆರಂಭಿಸಿದ್ದು, ದೇವಾಲಯದ ಆಡಳಿತದ ನಿರ್ಲಕ್ಷ್ಯ, ಭದ್ರತಾ ವ್ಯವಸ್ಥೆಯ ವೈಫಲ್ಯ ಹಾಗೂ ಅನುಮತಿ ಪ್ರಕ್ರಿಯೆಗಳನ್ನು ಪರಿಶೀಲಿಸಲಾಗುತ್ತಿದೆ. ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡುವುದರ ಜೊತೆಗೆ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ಅಧಿಕಾರಿಗಳು ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *