ಪತ್ನಿ ಹತ್ಯೆ ಮಾಡಿ ಶವವನ್ನು ಮಂಚದೊಳಗೆ ಬಚ್ಚಿಟ್ಟು ಪತಿ ಪರಾರಿ

ಪತ್ನಿ ಹತ್ಯೆ ಮಾಡಿ ಶವವನ್ನು ಮಂಚದೊಳಗೆ ಬಚ್ಚಿಟ್ಟು ಪತಿ ಪರಾರಿ

ಬೆಳಗಾವಿ, ಅಕ್ಟೋಬರ್ 08:
ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಿಜಕ್ಕೂ ಬೆಚ್ಚಿಬೀಳಿಸುವಂತಹ ಪತ್ನಿ ಹತ್ಯೆಯ ಘಟನೆ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಪತ್ನಿಯನ್ನು ಕ್ರೂರಿಯಾಗಿ ಕೊಂದು ಶವವನ್ನು ಮಂಚದೊಳಗೆ ಬಚ್ಚಿಟ್ಟು, ಅದರ ಮೇಲೆ ಬೆಡ್ ಹಾಸಿ ಮುಚ್ಚಿ ಪತಿ ಸ್ಥಳದಿಂದ ಪರಾರಿ ಆಗಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಹತ್ಯೆಯಾದ ಮಹಿಳೆ ಸಾಕ್ಷಿ ಕಂಬಾರ (20) ಎಂದು ಗುರುತಿಸಲಾಗಿದ್ದು, ಆರೋಪಿಯಾದ ಪತಿ ಆಕಾಶ್ ಇದೀಗ ಪರಾರಿಯಾಗಿದ್ದಾನೆ. ಈ ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲಗಳ ಪ್ರಕಾರ, ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಆಕಾಶ್ ಮತ್ತು ಸಾಕ್ಷಿ ಕಂಬಾರರ ಮದುವೆ ನಡೆದಿತ್ತು. ಆದರೆ ಮದುವೆಯ ಕೆಲ ತಿಂಗಳಲ್ಲೇ ಇಬ್ಬರ ನಡುವೆ ಬಿಕ್ಕಟ್ಟುಗಳು ಕಾಣಿಸಿಕೊಂಡಿದ್ದು, ಅದರಿಂದಲೇ ಈ ದಾರುಣ ಅಂತ್ಯ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಮೂರು ದಿನಗಳ ಹಿಂದೆ ಪತ್ನಿಯನ್ನು ಕೊಂದು ಶವವನ್ನು ಮಂಚದೊಳಗೆ ಬಚ್ಚಿಟ್ಟು, ತನ್ನ ಮೊಬೈಲ್ ಫೋನ್ ಸ್ವಿಚ್‌ಆಫ್ ಮಾಡಿಕೊಂಡು ಆಕಾಶ್ ಊರಿನಿಂದ ಪರಾರಿಯಾಗಿದ್ದಾನೆ. ಇತ್ತ ಅತ್ತೆ ಊರಿಗೆ ತೆರಳಿದ್ದರಿಂದ ಮನೆ ಬಾಗಿಲು ಬಂದ್ ಆಗಿದ್ದು, ಹತ್ಯೆಯ ವಿಷಯ ಯಾರಿಗೂ ತಿಳಿದಿರಲಿಲ್ಲ. ಬಳಿಕ ಅತ್ತೆ ಮನೆಗೆ ಹಿಂತಿರುಗಿ ಬಾಗಿಲು ತೆರೆಯುತ್ತಿದ್ದಂತೆ ದುರ್ವಾಸನೆ ಬರುತ್ತಿದ್ದು, ಹಾಸಿಗೆಯನ್ನು ತೆರೆಯುವಾಗ ಶವ ಪತ್ತೆಯಾಗಿದ್ದು, ಈ ವೇಳೆ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಹಾಗೂ ಗೋಕಾಕ್ ಡಿವೈಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಶವವನ್ನು ವಶಕ್ಕೆ ಪಡೆದು ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದು, ಪತಿ ಆಕಾಶ್‌ನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *