ಬೆಂಗಳೂರು, ಆಗಸ್ಟ್ 26:
ರಾಜಧಾನಿಯ ಕಲಾಸಿಪಾಳ್ಯ ಪ್ರದೇಶದಲ್ಲಿ ಸಂಭವಿಸಿದ ಒಂದು ಅಸಹಜ ಘಟನೆ ಇದೀಗ ನಗರದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೇವಲ ಕೇಸರಿ ಬಣ್ಣದ ಟವೆಲ್ ಹಾಕಿಕೊಂಡಿದ್ದಕ್ಕಾಗಿ ಸ್ಲಿಂದರ್ ಕುಮಾರ್ ಎಂಬ ಯುವಕನ ಮೇಲೆ ಮೂವರು ಆರೋಪಿಗಳು ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಕಲಾಸಿಪಾಳ್ಯದ ರಾಯಲ್ ಟ್ರಾವೆಲ್ಸ್ ಕಂಪನಿಯಲ್ಲೇ ನಡೆದಿದೆ.
ಹಲ್ಲೆ ಮಾಡಿದ ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸ್ ಠಾಣೆಯವರು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತರನ್ನು ತಬ್ರೇಜ್, ಇಮ್ರಾನ್ ಖಾನ್ ಮತ್ತು ಅಜೀಝ್ ಖಾನ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲೇ ಹಲ್ಲೆಯ ಕಾರಣ ಕೇಸರಿ ಟವೆಲ್ ಹಾಕಿಕೊಂಡಿರುವುದೇ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಆ.24ರ ರಾತ್ರಿ ಸುಮಾರು 9:30ರ ಸಮಯದಲ್ಲಿ ಸ್ಲಿಂದರ್ ಕುಮಾರ್ ಹಾಗೂ ಅವರ ಸಹೋದ್ಯೋಗಿ ಹರಿಕೃಷ್ಣ ರಾಯಲ್ ಟ್ರಾವೆಲ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದೇ ವೇಳೆ ಆರೋಪಿಗಳು ಅಲ್ಲಿ ಬಂದು ಸ್ಲಿಂದರ್ ಕುಮಾರ್ ಅವರನ್ನು ನಿಲ್ಲಿಸಿ “ನೀನು ಯಾಕೆ ಕೇಸರಿ ಟವೆಲ್ ಹಾಕಿಕೊಂಡಿದ್ದೀಯಾ?” ಎಂದು ಅವಾಚ್ಯ ಶಬ್ದಗಳಿಂದ ಬೈದು ದಾಳಿ ನಡೆಸಿದ್ದಾರೆ. ಹಲ್ಲೆಯ ಸಂದರ್ಭ ಆರೋಪಿಗಳು ಸ್ಲಿಂದರ್ ಕುಮಾರ್ ಅವರನ್ನು ನೆಲಕ್ಕುರುಳಿಸುವ ಮಟ್ಟಿಗೆ ತಳ್ಳಿದ್ರು.
ಈ ಘಟನೆ ಗಮನಿಸಿದ ಹರಿಕೃಷ್ಣ ಅವರು ಮಧ್ಯ ಪ್ರವೇಶಿಸಿ ಜಗಳ ತಡೆಯಲು ಪ್ರಯತ್ನಿಸಿದರೂ, ಆರೋಪಿಗಳು ಅವರಿಗೆ ಸಹ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಅವರ ಅಂಗಿಯನ್ನೇ ಹರಿದು ಹೊಡೆದಿದ್ದಾರೆ. ಆ ಬಳಿಕ ಅವರು “ನಿಮ್ಮ ಕೂಲಿ ಮಾಡುವ ಹುಡುಗ ಯಾಕೆ ಕೇಸರಿ ಟವೆಲ್ ಹಾಕಿಕೊಂಡಿದ್ದಾನೆ, ಅದನ್ನು ತಕ್ಷಣ ತೆಗೆಸಬೇಕು” ಎಂದು ಎಚ್ಚರಿಕೆ ನೀಡಿ ಅಲ್ಲಿ ನಿಂತುಕೊಳ್ಳದೆ ಹೋರಟಿದ್ದಾರೆ.
ಈ ಹಿನ್ನೆಲೆಯಲ್ಲಿ ಹರಿಕೃಷ್ಣ ಅವರು ತಕ್ಷಣವೇ ಕಲಾಸಿಪಾಳ್ಯ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಅವರು ಹೀಗೆ ಹೇಳಿದ್ದಾರೆ:
“ನಮ್ಮಲ್ಲಿ ಕೆಲಸ ಮಾಡುವ ಹುಡುಗ ಸ್ಲಿಂದರ್ ಕುಮಾರ್ ಭಾನುವಾರ ಸಂಜೆ ತಲೆಗೆ ಕೇಸರಿ ಟವೆಲ್ ಹಾಕಿಕೊಂಡಿದ್ದ. ಅದು ಬೆವರು ಒರೆಸಿಕೊಳ್ಳಲು ಬಳಸಿಕೊಂಡಿದ್ದ ಸಾಮಾನ್ಯ ಟವೆಲ್ ಮಾತ್ರ. ಆದರೆ ಆರೋಪಿಗಳು ಇದನ್ನೇ ಕಾರಣವನ್ನಾಗಿ ಮಾಡಿಕೊಂಡು ಜಗಳ ಶುರುಮಾಡಿದರು. ನಾನು ಮಧ್ಯ ಪ್ರವೇಶಿಸಿ ಗಲಾಟೆ ತಡೆಯಲು ಹೋದಾಗ ನಾನೂ ಹಲ್ಲೆಗೆ ಗುರಿಯಾದೆ. ನಾವು ಹಲವು ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಸ್ಥಳೀಯರೊಂದಿಗೆ ನಮ್ಮೆಲ್ಲರಿಗೂ ಸಹಕಾರ ಹಾಗೂ ಸಹಬಾಳ್ವೆ ಇದೆ. ಆದರೆ ಈ ಆರೋಪಿಗಳು ನಮ್ಮ ಏರಿಯಾದವರು ಅಲ್ಲ, ಇವರು ಬೇರೆ ಪ್ರದೇಶದಿಂದ ಬಂದವರಂತೆ ಕಾಣುತ್ತಾರೆ. ಇದಕ್ಕೂ ಮೊದಲು ನಾವು ಇವರನ್ನು ನಮ್ಮಲ್ಲಿ ನೋಡಿರಲಿಲ್ಲ. ಈಗ ನಮ್ಮ ಬದಿಯಲ್ಲಿ ಅನೇಕ ಸ್ಥಳೀಯರು ನಿಂತಿದ್ದಾರೆ.”
ಈ ಘಟನೆಯ ನಂತರ ಕಲಾಸಿಪಾಳ್ಯ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಕಾನೂನು ಕ್ರಮ ಕೈಗೊಳ್ಳಲು ಸಜ್ಜಾಗಿದ್ದಾರೆ. ಘಟನೆಯು ಸಾಮಾಜಿಕ ಹಿನ್ನಲೆ ಹೊಂದಿರುವುದರಿಂದ ನಗರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.