ಚಿಕ್ಕಬಳ್ಳಾಪುರ: ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಸ್ಫೋಟಕ ತಿರುವು
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಬಾಬು ನೇಣಿಗೆ ಶರಣಾದ ಘಟನೆ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದೆ. ಬಾಬು ತನ್ನ ಕಾರಿನಲ್ಲೇ ಬರೆದಿಟ್ಟಿದ್ದ ಡೆತ್ ನೋಟ್‌ನಲ್ಲಿ, ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಮತ್ತು ಅವರ ಆಪ್ತರಾದ ನಾಗೇಶ್, ಮಂಜುನಾಥ್ ಸರ್ಕಾರಿ ಕೆಲಸ ಕೊಡಿಸುವುದಾಗಿ 25 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆಗೆ ಕಾರಣರಾಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್–ಬಿಜೆಪಿ ನಡುವೆ ಆರೋಪ–ಪ್ರತ್ಯಾರೋಪಗಳ ರಾಜಕೀಯ ಸಮರ ಜೋರಾಗಿತ್ತು.
ಆದರೆ ಈಗ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ ಬಾಬುವೇ ಇತರರಿಗೆ ಕೆಲಸ ಕೊಡಿಸುವ ನೆಪದಲ್ಲಿ ಮೋಸ ಮಾಡಿದ್ದಾನೆ ಎಂಬ ಹೊಸ ಆರೋಪ ಹೊರಬಿದ್ದಿದೆ. ಬಾಬು ಬಾಲ್ಯಸ್ನೇಹಿತ ನಟೇಶ್ ಎಂಬಾತ, ಬಾಬು ತನ್ನನ್ನು ಸರ್ಕಾರಿ ಇಲಾಖೆಯಲ್ಲಿ ಪರ್ಮನೆಂಟ್ ಕೆಲಸ ಕೊಡಿಸುವುದಾಗಿ ನಂಬಿಸಿ 18 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕೇವಲ ಮಾತಿನಲ್ಲೇ ಅಲ್ಲದೆ, ಗೌರಿಬಿದನೂರಿನ ಹೋಟೆಲ್ೊಂದರಲ್ಲಿ ನಗದು ರೂಪದಲ್ಲಿ ಹಣ ಹಸ್ತಾಂತರ ಮಾಡಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಬಾಬುವಿನ ಖಾತೆಗೆ ಫೋನ್‌ಪೇ ಮೂಲಕ ವರ್ಗಾವಣೆ ಮಾಡಿದ ದಾಖಲೆಗಳೂ ತಮ್ಮ ಬಳಿ ಇವೆ ಎಂದು ನಟೇಶ್ ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಅವರು ಚಿಕ್ಕಬಳ್ಳಾಪುರ ಡಿವೈಎಸ್‍ಪಿ ಅವರಿಗೆ ಲಿಖಿತ ದೂರು ಸಹ ಸಲ್ಲಿಸಿದ್ದಾರೆ.
ಬಾಬು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಇಡಗೂರು ಗ್ರಾಮದವನಾಗಿದ್ದು, ಬಾಲ್ಯದಿಂದಲೇ ಅಜ್ಜಿ ಮನೆಯಲ್ಲಿ ಬೆಳೆದವನು. ಬಾಬು ಮತ್ತು ನಟೇಶ್ ಇಬ್ಬರೂ ಎಸ್‌ಎಸ್‌ಎಲ್‌ಸಿ(SSLC) ತನಕ ಒಂದೇ ಶಾಲೆಯಲ್ಲಿ ಓದಿ, ಅತೀವ ಆತ್ಮೀಯರಾದ ಸ್ನೇಹಿತರಾಗಿದ್ದರು. ಈ ಆಪ್ತ ಸ್ನೇಹದ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಬಾಬು ಕೆಲಸ ಕೊಡಿಸುವ ನೆಪದಲ್ಲಿ 18 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ ಎಂಬುದು ಈಗ ಬೆಳಕಿಗೆ ಬಂದಿದೆ.
ಇನ್ನೊಂದೆಡೆ, ಡೆತ್ ನೋಟ್‌ನಲ್ಲಿ ಹೆಸರು ಬಂದಿದ್ದ ಸಂಸದ ಸುಧಾಕರ್ ಹಾಗೂ ಅವರ ಆಪ್ತರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸಂಸದನೇ ದಲಿತ ಯುವಕನ ಸಾವಿಗೆ ಕಾರಣ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡರು ರಾಜಕೀಯ ಕಿತ್ತಾಟ ಮಾಡುತ್ತಿರುವುದಾಗಿ ಆರೋಪಿಸಿದ್ದರು. ಆದರೆ ಇತ್ತೀಚಿನ ಬೆಳವಣಿಗೆಯಿಂದ ಪ್ರಕರಣ ಸಂಪೂರ್ಣ ವಿಭಿನ್ನ ತಿರುವು ಪಡೆದುಕೊಂಡಿದೆ.
ಇದೀಗ ನ್ಯಾಯಾಲಯವು ಪ್ರಕರಣದಲ್ಲಿ ಆರೋಪಿಗಳಾಗಿದ್ದ ನಾಗೇಶ್ ಮತ್ತು ಮಂಜುನಾಥ್‌ಗೆ ಶರತ್ತುಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಜೊತೆಗೆ, ಸಂಸದ ಸುಧಾಕರ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಸುಧಾಕರ್ ತಾತ್ಕಾಲಿಕ ನೆಮ್ಮದಿಯುಂಟಾಗಿದೆ.
ಪ್ರಕರಣದ ಸಂಪೂರ್ಣ ತನಿಖೆಯನ್ನು ಈಗ ಚಿಕ್ಕಬಳ್ಳಾಪುರ ಜಿಲ್ಲಾ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಠಾಣೆಯಲ್ಲಿ ಮುಂದುವರಿಸಲಾಗಿದೆ. ಪ್ರತಿದಿನವೂ ಪ್ರಕರಣದಲ್ಲಿ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿರುವುದರಿಂದ ಜನರಲ್ಲಿ ಕುತೂಹಲ ಹೆಚ್ಚಾಗಿದೆ. ಬಾಬುವೇ ನಿಜವಾದ ಬಲಿಯಾಗಿದ್ನಾ ಅಥವಾ ಇತರರನ್ನು ವಂಚನೆ ಮಾಡಿ ಕೊನೆಗೆ ಆತ್ಮಹತ್ಯೆಗೆ ಶರಣಾದ್ನಾ ಎಂಬ ಗೊಂದಲದ ಮಧ್ಯೆ, ಪ್ರಕರಣ ಇನ್ನಷ್ಟು ರೋಚಕ ಹಾದಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ತನಿಖೆ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.