ನಾಶಿಕ್‌ನ ಜೈಲ್ ರಸ್ತೆಯ ನಾರಾಯಣ ಬಾಪು ನಗರದಲ್ಲಿ 87 ವರ್ಷದ ಮುರಳೀಧರ್ ಜೋಶಿ ಮತ್ತು 79 ವರ್ಷದ ಪತ್ನಿ ಲತಾ ಜೋಶಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲತಾ ಅವರ ದೀರ್ಘಕಾಲಿನ ಅನಾರೋಗ್ಯವು ಈ ದುರಂತಕ್ಕೆ ಕಾರಣವಾಗಿರಬಹುದು.
ನಾಶಿಕ್: ನಾಶಿಕ್‌ನ ಜೈಲ್ ರಸ್ತೆ ಪ್ರದೇಶದ ನಾರಾಯಣ ಬಾಪು ನಗರದಲ್ಲಿ ಜನವರಿ 22, 2025 ರ ಬುಧವಾರ ಸಂಜೆ ನಡೆದ ಘಟನೆಯೊಂದು ಸ್ಥಳೀಯರನ್ನು ಆಘಾತಕ್ಕೀಡು ಮಾಡಿದೆ. 87 ವರ್ಷದ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯರಾದ ಮುರಳೀಧರ್ ಜೋಶಿ ಅವರು ತಮ್ಮ ಮನೆಯ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೇ ವೇಳೆ ಅವರ 79 ವರ್ಷದ ಪತ್ನಿ ಲತಾ ಜೋಶಿ, ಇದೇ ವೇಳೆ ಹಾಸಿಗೆಯ ಮೇಲೆ ಶವವಾಗಿ ಕಂಡುಬಂದಿದ್ದಾರೆ. ಲತಾ ಅವರೂ ಸಹ ನಿವೃತ್ತ ಮುಖ್ಯೋಪಾಧ್ಯಾಯಿನಿಯಾಗಿದ್ದರು ಮತ್ತು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಅಪ್‌ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಈ ಘಟನೆಯನ್ನು ಆಕಸ್ಮಿಕ ಸಾವು ಪ್ರಕರಣವಾಗಿ ದಾಖಲಿಸಿಕೊಂಡಿದ್ದು, ಮುರಳೀಧರ್ ಜೋಶಿ ಬರೆದಿದ್ದಾರೆ ಎನ್ನಲಾದ ಒಂದು ಟಿಪ್ಪಣಿಯನ್ನು ಘಟನಾಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಆ ಟಿಪ್ಪಣಿಯಲ್ಲಿ, ಜೋಶಿ ಅವರು ತಮ್ಮ ಪತ್ನಿಯನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಈ ಘಟನೆಗೆ ಯಾರನ್ನೂ ದೂಷಿಸಬಾರದು ಎಂದು ಟಿಪ್ಪಣಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.