ನೆಲಮಂಗಲ: ಆರ್ಟಿಒ ಅಧಿಕಾರಿಗಳ ಸೋಗಿನಲ್ಲಿ ವಾಹನ ತಪಾಸಣೆ ನಡೆಸಿ ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಕೆಆರ್ಎಸ್ ಕಾರ್ಯಕರ್ತರು ಹಿಡಿದ ಘಟನೆ ನೆಲಮಂಗಲದ ಕುಲುವನಹಳ್ಳಿ ಬಳಿ ನಡೆದಿದೆ.
ತುಮಕೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮೂವರು ನಕಲಿ ಅಧಿಕಾರಿಗಳು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದರು ಎನ್ನಲಾಗಿದೆ. ಲಾರಿಗಳನ್ನು ನಿಲ್ಲಿಸಿ ದಾಖಲೆ ಪರಿಶೀಲನೆ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಆರೋಪ ಕೇಳಿಬಂದಿದೆ.

ಈ ಬಗ್ಗೆ ಮಾಹಿತಿ ಪಡೆದ ಕೆಆರ್ಎಸ್ ಕಾರ್ಯಕರ್ತರು ಸ್ಥಳಕ್ಕೆ ತೆರಳಿದ್ದು, ಅವರನ್ನು ಕಂಡ ಕೂಡಲೇ ಮೂವರು ಆರೋಪಿಗಳ ಪೈಕಿ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಓರ್ವನನ್ನು ಕೆಆರ್ಎಸ್ ಕಾರ್ಯಕರ್ತರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಸದ್ಯ ಆರೋಪಿಯನ್ನು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ನಕಲಿ ಆರ್ಟಿಒ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರೇ? ಎಷ್ಟು ದಿನಗಳಿಂದ ಈ ರೀತಿ ಹಣ ವಸೂಲಿ ಮಾಡುತ್ತಿದ್ದರು? ಇವರ ಹಿಂದೆ ಮತ್ತಷ್ಟು ಮಂದಿ ಇದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
