ನೆಲಮಂಗಲ: ಶಾಲೆಗೆ ತೆರಳುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ, ಬಾಲಕಿ ಸ್ಥಳದಲ್ಲೇ ಸಾ*

ನೆಲಮಂಗಲ: ತನ್ನ ದೊಡ್ಡಮ್ಮನೊಂದಿಗೆ ಶಾಲೆಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ 10 ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೀರವಾರ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.

ಮೃತ ಬಾಲಕಿಯನ್ನು ಲಿಖಿತಾ (10) ಎಂದು ಗುರುತಿಸಲಾಗಿದೆ. ಲಿಖಿತಾ ಬೀರವಾರ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಎಂದಿನಂತೆ ಬೆಳಿಗ್ಗೆ ತಾಯಿ ತಿಂಡಿ ಮಾಡಿಸಿ ಕೆಲಸಕ್ಕೆ ತೆರಳಿದ್ದರು. ಬಳಿಕ ಲಿಖಿತಾ ತನ್ನ ದೊಡ್ಡಮ್ಮನೊಂದಿಗೆ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ನೆಲಮಂಗಲದಿಂದ ಕುಣಿಗಲ್ ಕಡೆಗೆ ವೇಗವಾಗಿ ಸಾಗುತ್ತಿದ್ದ ಕಾರೊಂದು ಚಾಲಕನ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಲಿಖಿತಾ ಮತ್ತು ಆಕೆಯ ದೊಡ್ಡಮ್ಮಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಿಖಿತಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆಯಲ್ಲಿ ಬಾಲಕಿಯ ದೊಡ್ಡಮ್ಮ ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಮಾಹಿತಿ ಪಡೆದ ಕುದೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರು ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದೇ ವೇಳೆ ಬೀರವಾರ ಗ್ರಾಮದ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ವಾಹನಗಳು ಅತಿವೇಗದಲ್ಲಿ ಸಂಚರಿಸುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಹಲವು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು ಪ್ರತಿದಿನ ರಸ್ತೆ ದಾಟುವ ಪರಿಸ್ಥಿತಿ ಇರುವುದರಿಂದ ಈ ಸ್ಥಳದಲ್ಲಿ ತಕ್ಷಣವೇ ಸ್ಕೈವಾಕ್ ಅಥವಾ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು, ಜೊತೆಗೆ ವೇಗ ನಿಯಂತ್ರಣ ಕ್ರಮಗಳು, ಎಚ್ಚರಿಕೆ ಫಲಕಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಮೃತ ಬಾಲಕಿಯ ಸಾವಿನಿಂದ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

Spread the love

Leave a Reply

Your email address will not be published. Required fields are marked *