ಪತ್ನಿಗೆ ನೇ* ಹಾಕಿ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್‌ ಮಾಡಿ ತೋರಿಸಿದ ಸೈಕೋ ಪತಿ

ಬಾಗಲಕೋಟೆ: ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಹತ್ಯೆಗೈದು, ಆಕೆ ಪ್ರಾಣಕ್ಕಾಗಿ ಹೋರಾಡುತ್ತಿದ್ದ ದೃಶ್ಯವನ್ನು ಅತ್ತೆ–ಮಾವನಿಗೆ ವಿಡಿಯೋ ಕಾಲ್ ಮೂಲಕ ತೋರಿಸಿರುವ ಬೆಚ್ಚಿಬೀಳಿಸುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ. ಈ ಅಮಾನವೀಯ ಕೃತ್ಯ ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ.

ಹತ್ಯೆಗೀಡಾದ ಮಹಿಳೆಯನ್ನು ಭಾಗ್ಯಶ್ರೀ ಜಿಗಳೂರು (23) ಎಂದು ಗುರುತಿಸಲಾಗಿದ್ದು, ಪ್ರಕರಣದಲ್ಲಿ ಆಕೆಯ ಪತಿ ಪ್ರವೀಣ್ ಜಿಗಳೂರು ಆರೋಪಿಯಾಗಿ ಗುರುತಿಸಲಾಗಿದೆ. ಘಟನೆಯ ಬಳಿಕ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ಹೊಂದಿದ್ದ ಪ್ರವೀಣ್, ಈ ವಿಚಾರವಾಗಿ ಪತ್ನಿಯೊಂದಿಗೆ ಪದೇಪದೇ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದೇ ಅನುಮಾನದ ಹಿನ್ನೆಲೆ ಭಾನುವಾರ ಸಂಜೆ ಆಕೆಯ ಮೇಲೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ ಬಳಿಕ ನೇಣು ಬಿಗಿದು ಹತ್ಯೆಗೈದಿರುವ ಆರೋಪ ಕೇಳಿಬಂದಿದೆ.

ಆರೋಪದ ಪ್ರಕಾರ, ಹತ್ಯೆಯ ವೇಳೆ ಭಾಗ್ಯಶ್ರೀ ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಸಂದರ್ಭವನ್ನು ಪ್ರವೀಣ್ ತನ್ನ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮಾಡಿ ಆಕೆಯ ತಂದೆ–ತಾಯಿಗೆ ತೋರಿಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಘಟನೆಯ ದೃಶ್ಯವನ್ನು ಪ್ರತ್ಯೇಕವಾಗಿ ಮೊಬೈಲ್‌ನಲ್ಲಿ ವಿಡಿಯೋ ರೂಪದಲ್ಲಿಯೂ ಚಿತ್ರೀಕರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿಯು ಚಿತ್ರೀಕರಿಸಿದ ವಿಡಿಯೋದಲ್ಲಿ ನೇಣಿನ ಕುಣಿಕೆಯ ಹಿನ್ನಲೆಯಲ್ಲಿ ಮದುವೆ ಸಂದರ್ಭದಲ್ಲಿ ಬರೆಯಲಾಗಿದ್ದ ಇಬ್ಬರ ಹೆಸರೂ ಕಾಣಿಸುತ್ತಿವೆ ಎನ್ನಲಾಗಿದೆ. ಈ ವಿಡಿಯೋ ಇದೀಗ ತನಿಖೆಯ ಭಾಗವಾಗಿ ಪರಿಶೀಲನೆಗೆ ಒಳಪಡಿಸಲಾಗಿದೆ.

ಮಾಹಿತಿಯಂತೆ, ದಂಪತಿಯ ನಡುವೆ ಕುಟುಂಬ ಕಲಹ ಮುಂದುವರಿದಿದ್ದು, ಸುಮಾರು ಎರಡು ತಿಂಗಳ ಹಿಂದೆ ಭಾಗ್ಯಶ್ರೀ ಪತಿಯೊಂದಿಗೆ ಜಗಳವಾಡಿ ತನ್ನ ತವರು ಮಹಾಲಿಂಗಪುರಕ್ಕೆ ತೆರಳಿದ್ದಳು. ನಂತರ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಚೆನ್ನಾಗಿ ಬದುಕೋಣ ಎಂದು ನಂಬಿಸಿ ಜುಲೈ 27ರಂದು ಮತ್ತೆ ಗಲಗಲಿಯ ಮನೆಗೆ ಕರೆತಂದಿದ್ದ ಪ್ರವೀಣ್, ಅದೇ ದಿನ ಸಂಜೆ ಈ ಕೃತ್ಯ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬೀಳಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಿದ್ದಾರ್ಥ್ ಗೋಯೆಲ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದು, ಘಟನೆಯ ನಿಖರ ಹಿನ್ನೆಲೆ ಹಾಗೂ ಇತರ ಎಲ್ಲ ಅಂಶಗಳ ಕುರಿತು ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ಗಲಗಲಿ ಗ್ರಾಮ ಸೇರಿದಂತೆ ಜಿಲ್ಲೆಯಾದ್ಯಂತ ತೀವ್ರ ಆಘಾತ ಮತ್ತು ಚರ್ಚೆಗೆ ಕಾರಣವಾಗಿದೆ.

Spread the love

Leave a Reply

Your email address will not be published. Required fields are marked *