ನೆಲಮಂಗಲ: ಆಟವಾಡುತ್ತಿದ್ದ ವೇಳೆ ಮೊದಲ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎರಡು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ದೀಕ್ಷಿತ್ (2) ಎಂದು ಗುರುತಿಸಲಾಗಿದ್ದು, ಈತ ಟಿ.ದಾಸರಹಳ್ಳಿ ನಿವಾಸಿಗಳಾದ ನವೀನ್ ಕುಮಾರ್ ಹಾಗೂ ಕಾವ್ಯ ದಂಪತಿಯ ಪುತ್ರನಾಗಿದ್ದಾನೆ.
ಮಾಹಿತಿಯ ಪ್ರಕಾರ, ನವೀನ್ ಕುಮಾರ್ ಹಾಗೂ ಕಾವ್ಯ ದಂಪತಿ ಎರಡು ದಿನಗಳ ಹಿಂದೆ ತೋಟದಗುಡ್ಡದಹಳ್ಳಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಮನೆಯ ಮೊದಲ ಮಹಡಿಯಲ್ಲಿ ಆಟವಾಡುತ್ತಿದ್ದ ದೀಕ್ಷಿತ್ ಆಕಸ್ಮಿಕವಾಗಿ ಮೆಟ್ಟಿಲು ಮೇಲ್ಭಾಗದಿಂದ ಜಾರಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಮಗುವನ್ನು ಕುಟುಂಬಸ್ಥರು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮಗು ಕೋಮಾ ಸ್ಥಿತಿಗೆ ಜಾರಿತ್ತು. ಸುಮಾರು 24 ಗಂಟೆಗಳ ಕಾಲ ವೈದ್ಯರು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ದೀಕ್ಷಿತ್ ಮೃತಪಟ್ಟಿದ್ದಾನೆ.
ಮಗುವಿನ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಪೋಷಕರ ದುಃಖ ನೋಡುಗರ ಕಣ್ಣಲ್ಲೂ ನೀರು ತರಿಸಿದೆ. ಸಂಬಂಧಿಕರ ಮನೆಗೆ ಸಂತೋಷದಿಂದ ಬಂದಿದ್ದ ಕುಟುಂಬಕ್ಕೆ ಈ ದುರಂತ ಆಘಾತ ಉಂಟುಮಾಡಿದೆ.
ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮಗುವಿನ ಮೃತದೇಹವನ್ನು ನೆಲಮಂಗಲ ಸರ್ಕಾರಿ ಶವಾಗಾರಕ್ಕೆ ರವಾನಿಸಲಾಗಿದೆ.
ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
