ಮಹಾಮಳೆ ದುರಂತ: ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು 7 ಮಂದಿ ಸಾವು

ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆ ಅಕ್ಷರಶಃ ಮೃತ್ಯುರೂಪಿಯಾಗಿ ಅಪ್ಪಳಿಸಿದ್ದು, ರಾಜಧಾನಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಶಿವಾಜಿನಗರದಲ್ಲಿರುವ Bowring and Lady Curzon Hospital ಆವರಣದ ಹಳೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಈ ದುರಂತದಿಂದ ಇಡೀ ನಗರವೇ ಬೆಚ್ಚಿಬಿದ್ದಿದ್ದು, ಮೃತರ ಕುಟುಂಬಗಳಲ್ಲಿ ಆಕ್ರಂದನ ಮಡುಗಟ್ಟಿದೆ.

ನಗರದಲ್ಲಿ ಸುರಿದ ಅಕಸ್ಮಾತ್ ಭಾರೀ ಮಳೆಯಿಂದಾಗಿ ಶಿವಾಜಿನಗರದ Russell Market ಸುತ್ತಮುತ್ತಲಿನ ಪ್ರದೇಶಗಳು ಸಂಪೂರ್ಣ ನೀರಿನಿಂದ ತುಂಬಿಕೊಂಡಿದ್ದವು. ಇದೇ ಸಂದರ್ಭದಲ್ಲಿ ಬೌರಿಂಗ್ ಆಸ್ಪತ್ರೆಯ ಪಕ್ಕದಲ್ಲಿದ್ದ ಹಳೆಯ ಹಾಗೂ ದುರ್ಬಲಗೊಂಡ ಕಾಂಪೌಂಡ್ ಗೋಡೆ ಮಳೆಯ ಒತ್ತಡ ತಾಳಲಾರದೆ ಏಕಾಏಕಿ ಕುಸಿದು ಬಿದ್ದಿದೆ. ದುರದೃಷ್ಟವಶಾತ್, ಆ ಗೋಡೆಯ ಪಕ್ಕದಲ್ಲೇ ಮಳೆಯಿಂದ ತಪ್ಪಿಸಿಕೊಳ್ಳಲು ಆಶ್ರಯ ಪಡೆದಿದ್ದ ಬೀದಿ ವ್ಯಾಪಾರಿಗಳು ಮತ್ತು ಸಾರ್ವಜನಿಕರ ಮೇಲೆ ಗೋಡೆ ಬಿದ್ದಿದ್ದು ಈ ದುರಂತಕ್ಕೆ ಕಾರಣವಾಗಿದೆ.

ಗೋಡೆ ಕುಸಿದ ರಭಸಕ್ಕೆ ಅದರ ಅಡಿಯಲ್ಲಿ ಸಿಲುಕಿದ್ದ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಪೈಕಿ ಮೂವರು ಪುಟ್ಟ ಮಕ್ಕಳು ಸೇರಿರುವುದು ಘಟನೆಗೆ ಇನ್ನಷ್ಟು ದುಃಖದ ತೀವ್ರತೆಯನ್ನು ತಂದಿದೆ. ಜೀವನೋಪಾಯಕ್ಕಾಗಿ ಬೀದಿ ವ್ಯಾಪಾರ ಮಾಡುತ್ತಿದ್ದ ಬಡಜನರು ಮಳೆಯಿಂದ ರಕ್ಷಿಸಿಕೊಳ್ಳಲು ಗೋಡೆಯ ಬಳಿ ನಿಂತಿದ್ದಾಗಲೇ ಕ್ಷಣಾರ್ಧದಲ್ಲಿ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿದ್ದವರು ಈ ಭೀಕರ ದೃಶ್ಯವನ್ನು ಕಂಡು ಬೆಚ್ಚಿಬಿದ್ದಿದ್ದು, ಅನೇಕರು ಕಣ್ಣೀರಿಡುವಂತಾಯಿತು.

ಘಟನೆ ಸಂಭವಿಸಿದ ತಕ್ಷಣ ಶಿವಾಜಿನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಗೋಡೆಯ ಅವಶೇಷಗಳಡಿ ಸಿಲುಕಿದ್ದವರನ್ನು ಹೊರತೆಗೆದಲು ಭಾರೀ ಶ್ರಮವಹಿಸಬೇಕಾಯಿತು. ನಿರಂತರ ಮಳೆಯ ನಡುವೆಯೇ ಜೆಸಿಬಿ ಯಂತ್ರಗಳು ಹಾಗೂ ಕಟರ್ ಉಪಕರಣಗಳ ಸಹಾಯದಿಂದ ಅವಶೇಷಗಳನ್ನು ತೆರವುಗೊಳಿಸಲಾಯಿತು. ಆದರೆ ದುರ್ಭಾಗ್ಯವಶಾತ್ ಸಿಲುಕಿದ್ದವರಲ್ಲಿ ಯಾರನ್ನೂ ಜೀವಂತವಾಗಿ ಉಳಿಸಲು ಸಾಧ್ಯವಾಗಲಿಲ್ಲ.

ಸ್ಥಳೀಯರು ಈ ಘಟನೆಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಬಹುಕಾಲದಿಂದ ಹಳೆಯದು ಹಾಗೂ ದುರ್ಬಲಗೊಂಡಿದ್ದರೂ, ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಸರಿಯಾದ ನಿರ್ವಹಣೆ ಇಲ್ಲದಿರುವುದು ಹಾಗೂ ಮಳೆಯ ಭಾರೀ ಒತ್ತಡವೇ ಈ ದುರಂತಕ್ಕೆ ಕಾರಣವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ಈ ವರ್ಷದ ಮೊದಲ ದೊಡ್ಡ ಮಳೆಯಲ್ಲೇ ಇಂತಹ ಭಾರೀ ಪ್ರಾಣಹಾನಿ ಸಂಭವಿಸಿರುವುದು ನಗರಾಡಳಿತ ಹಾಗೂ ಪಾಲಿಕೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ. ಮೃತರ ಕುಟುಂಬಗಳಿಗೆ ತಕ್ಷಣ ಪರಿಹಾರ ಘೋಷಿಸಬೇಕು ಹಾಗೂ ಇಂತಹ ಹಳೆಯ, ಅಪಾಯಕಾರಿ ಗೋಡೆಗಳನ್ನು ತಕ್ಷಣ ತೆರವುಗೊಳಿಸಿ ಭದ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Spread the love

Leave a Reply

Your email address will not be published. Required fields are marked *