ಬೆಂಗಳೂರು: ನಗರದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತವು ಹೃದಯವಿದ್ರಾವಕ ದೃಶ್ಯಕ್ಕೆ ಕಾರಣವಾಗಿದೆ. ಶಾಲಾ ಬಸ್ ಮತ್ತು ಸ್ಕೂಟರ್ ನಡುವೆ ನಡೆದ ಈ ದುರಂತದಲ್ಲಿ ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ನಗರದ ಸಿಎಆರ್ ವಿಭಾಗದಲ್ಲಿ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ನಾಗನಗೌಡ ಅವರು ಇಂದು ಬೆಳಿಗ್ಗೆ ತಮ್ಮ ಇಬ್ಬರು ಮಕ್ಕಳಾದ ವರ್ಷ (2 ವರ್ಷ) ಮತ್ತು ಭಾನು (4 ವರ್ಷ) ರನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹಾಲು ತರಲು ಹೊರಟಿದ್ದರು ಎಂದು ತಿಳಿದುಬಂದಿದೆ. ಕುಟುಂಬದ ಸಾಮಾನ್ಯ ಬೆಳಗಿನ ಕೆಲಸದ ಭಾಗವಾಗಿದ್ದ ಈ ಪ್ರಯಾಣ ದುರಂತಕ್ಕೆ ತಿರುಗಿದೆ. ಥಣಿಸಂದ್ರ ಮುಖ್ಯರಸ್ತೆಯ ಸಮೀಪ ಚಲಿಸುತ್ತಿದ್ದಾಗ ಎದುರು ದಿಕ್ಕಿನಿಂದ ಅತಿವೇಗದಲ್ಲಿ ಬಂದ ‘ಅಜ್ ಮೋನಿ’ ಶಾಲೆಯ ಬಸ್ ಏಕಾಏಕಿ ತಿರುವು ಪಡೆದಿದೆ ಎನ್ನಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದು, ದುರದೃಷ್ಟವಶಾತ್ ಬಸ್‌ನ ಚಕ್ರಗಳು ಮಕ್ಕಳ ಮೇಲೆ ಹರಿದಿವೆ. ಈ ಭೀಕರ ದೃಶ್ಯವನ್ನು ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಮಕ್ಕಳಿಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಂದೆ ನಾಗನಗೌಡ ಅವರು ಗಂಭೀರ ಆಘಾತಕ್ಕೊಳಗಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಘಟನೆ ತಿಳಿದ ತಕ್ಷಣ ಉತ್ತರ ವಿಭಾಗದ ಸಂಚಾರ ಪೊಲೀಸ್ ಉಪ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಣ್ಣೂರು ಸಂಚಾರ ಠಾಣೆಯ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ‘ಅಜ್ ಮೋನಿ’ ಶಾಲೆಯ ಬಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದು, ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳು ಸೇರಿದಂತೆ ವಿವಿಧ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತಿದೆ. ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆಯೇ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ದುರಂತದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳೀಯರು ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.
ಇದನ್ನು ನೋಡಿ :https://www.facebook.com/reel/1991094211756905
