ಸೊಸೆ ಮೇಲೆ ಮಾವನ ದೌರ್ಜನ್ಯ; ಮಗನಿಗೆ ಹೇಳಿದರೆ ಕೊಲೆ ಬೆದರಿಕೆ

ಬೆಂಗಳೂರು ಕುಟುಂಬದ ಒಳಗೇ ನಡೆದ ಅಸಭ್ಯ ವರ್ತನೆಯೊಂದು ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. “ನನ್ನ ಆಸೆ ಈಡೇರಿಸು” ಎಂದು ಒತ್ತಾಯಿಸಿ, ಸೊಸೆಗೆ ಮಾವನೇ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಥಣಿಸಂಧ್ರ ಪ್ರದೇಶದ ಪ್ರತಿಷ್ಠಿತ ಶಾಲೆಯ ಪ್ರಿನ್ಸಿಪಾಲ್ ಆಗಿರುವ ಮಹಿಳೆಯೊಬ್ಬರು, ತಮ್ಮ ಗಂಡನ ತಂದೆಯ ವಿರುದ್ಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಕಾವಲ್ ಬೈರಸಂಧ್ರದ ಶಾಲೆಯೊಂದರ ಸಂಸ್ಥಾಪಕನಾಗಿರುವುದಾಗಿ ತಿಳಿದುಬಂದಿದೆ. ವಿಷಯವನ್ನು ಮಗನಿಗೆ ತಿಳಿಸಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

2007ರಲ್ಲಿ ವಿವಾಹವಾದ ಈ ಮಹಿಳೆಗೆ ಆರಂಭಿಕ ದಿನಗಳಲ್ಲಿ ಕುಟುಂಬ ಜೀವನ ಸಾಮಾನ್ಯವಾಗಿಯೇ ಸಾಗಿತ್ತು. ಆದರೆ ಕಾಲಕ್ರಮೇಣ ಮಾವನ ವರ್ತನೆ ಅನುಚಿತ ದಿಕ್ಕು ತಾಳಲು ಆರಂಭಿಸಿತು ಎಂದು ದೂರಿನಲ್ಲಿ ಹೇಳಲಾಗಿದೆ. 2005ರಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ಆರೋಪಿ, 2006ರಲ್ಲಿ ಎರಡನೇ ಮದುವೆಯಾಗಿದ್ದರೂ, ತನ್ನ ಸೊಸೆಯ ಮೇಲೆ ಕೆಟ್ಟ ನೋಟ ಹಾಕುತ್ತಿದ್ದನೆಂದು ಆರೋಪಿಸಲಾಗಿದೆ. ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಆತ, ಮಹಿಳೆ ಮನೆಯಲ್ಲಿ ಒಬ್ಬಳೇ ಇರುವ ಸಮಯಗಳನ್ನು ಗಮನಿಸಿ ಮನೆಗೆ ಬಂದು ಕಿರುಕುಳ ನೀಡುತ್ತಿದ್ದನೆಂದು ಹೇಳಲಾಗಿದೆ.

ಅಸಭ್ಯ ಪದಗಳನ್ನು ಬಳಸುವುದು, ಬಲವಂತವಾಗಿ ಬಟ್ಟೆ ಬಿಚ್ಚಲು ಯತ್ನಿಸುವುದು, ಅನಾಚಾರ ವರ್ತನೆ ತೋರಿಸುವುದು ಸೇರಿದಂತೆ ಹಲವು ರೀತಿಯ ಲೈಂಗಿಕ ದೌರ್ಜನ್ಯಗಳನ್ನು 2020ರಿಂದಲೇ ಆರಂಭಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ. ಆರಂಭದಲ್ಲಿ ಭಯದಿಂದ ಮತ್ತು ಕುಟುಂಬದ ಮಾನಹಾನಿಯ ಆತಂಕದಿಂದ ಮಹಿಳೆ ವಿಷಯವನ್ನು ಹೊರಗೆ ಹೇಳದೆ ಸಹಿಸಿಕೊಂಡಿದ್ದಾಳೆ. ಆದರೆ ಆಕೆಯ ಮೇಲಷ್ಟೇ ಅಲ್ಲ, ಮಕ್ಕಳಿಗೂ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಕೆಲ ಸಂದರ್ಭಗಳಲ್ಲಿ ದೈಹಿಕ ಹಲ್ಲೆಯನ್ನೂ ನಡೆಸಿದ್ದಾನೆ ಎನ್ನಲಾಗಿದೆ.

ಅಪಾರ್ಟ್‌ಮೆಂಟ್‌ನ ಲಿಫ್ಟ್‌ ಒಳಗೆ, ಶಾಲೆಯ ಕ್ಯಾಬಿನ್‌ನಲ್ಲಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸೊಸೆಯ ಸೌಂದರ್ಯದ ಬಗ್ಗೆ ಪತ್ರ ಬರೆದು ಆಕೆಯ ಮುಂದೆ ಓದುತ್ತಿದ್ದ ಆತ, ನಂತರ ಆ ಪತ್ರವನ್ನು ತಾನೇ ಇಟ್ಟುಕೊಳ್ಳುತ್ತಿದ್ದನೆಂದು ಆರೋಪಿಸಲಾಗಿದೆ. ಇತ್ತೀಚೆಗೆ ಮತ್ತೆ ಆಕೆಯ ಮೈಕೈ ಮುಟ್ಟಿ ಕಿರುಕುಳ ನೀಡಿದಾಗ ಮಹಿಳೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾಳೆ. ಇದರಿಂದ ಆಕ್ರೋಶಗೊಂಡ ಆರೋಪಿ ಹಲ್ಲೆ ನಡೆಸಿದ್ದಾನೆ ಎಂಬುದು ದೂರಿನ ಮತ್ತೊಂದು ಅಂಶ.

ಕೊನೆಗೂ ಸಹನೆಯ ಮಿತಿ ಮೀರಿ, ಸಂತ್ರಸ್ತೆ ಈ ವಿಚಾರವನ್ನು ತಮ್ಮ ಪತಿಗೆ ತಿಳಿಸಿದ್ದಾಳೆ. ಪತಿ ಪ್ರಶ್ನಿಸಿದ ಬಳಿಕ ಹಿರಿಯರು ಮಧ್ಯಸ್ಥಿಕೆ ವಹಿಸಿ ಆರೋಪಿ ವಿರುದ್ಧ ಎಚ್ಚರಿಕೆ ನೀಡಿದರೂ, ಕೆಲವು ದಿನಗಳ ಬಳಿಕ ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದಾನೆ ಎನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆ ಕೊನೆಗೂ ಕಾನೂನು ನೆರವು ಪಡೆಯಲು ಮುಂದಾಗಿದ್ದು, ಮಾವನ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದಾಳೆ. ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.

Spread the love

Leave a Reply

Your email address will not be published. Required fields are marked *