ನೆಲಮಂಗಲ: ಯುವತಿಯೊಬ್ಬಳನ್ನು ತನ್ನ ಸ್ನೇಹಿತೆಯ ಕೊಠಡಿಗೆ ಕರೆದೊಯ್ದು ಕೊಲೆಗೈದಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಸ್ಥಳೀಯರು ಹಾಗೂ ವಿದ್ಯಾರ್ಥಿ ಸಮುದಾಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮೃತರಾಗಿರುವ 21 ವರ್ಷದಯ ದೇವಿಶ್ರೀ, ಮೂಲತಃ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿ. ಕಳೆದ ಮೂರು ವರ್ಷಗಳಿಂದ ದೇವಿಶ್ರೀ ಬೆಂಗಳೂರಿನಲ್ಲಿ ವಾಸ್ತವ್ಯ ಮಾಡಿ ತನ್ನ ಉನ್ನತ ಶಿಕ್ಷಣವನ್ನು ಮುಂದುವರಿಸುತ್ತಿದ್ದಳು. ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿರುವ ದೇವಿಶ್ರೀ ಭಾನುವಾರ ಬೆಳಗ್ಗೆ ಪ್ರೇಮ್ ವರ್ಧನ್ ಎಂಬಾತನೊಂದಿಗೆ ತನ್ನ ಸ್ನೇಹಿತೆಯಿರುವ ರೂಂಗೆ ತೆರಳಿದ್ದಳು ಎಂದು ಮಾಹಿತಿ ಲಭ್ಯವಾಗಿದೆ.
ಅಲ್ಲೇ ಯಾವುದೇ ರೀತಿಯ ಜಗಳ ಅಥವಾ ವೈಮನಸ್ಯ ನಡೆದಿರಬಹುದೆನ್ನಲು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಘಟನೆ ನಂತರ ಪ್ರೇಮ್ ವರ್ಧನ್ ಒಬ್ಬನೇ ಕೋಣೆಯಿಂದ ಹೊರಬಂದು ಅಲ್ಲಿಂದ ನಾಪತ್ತೆಯಾಗಿದ್ದಾನೆ. ಇಂದು ಬೆಳಗ್ಗೆ ಸ್ನೇಹಿತೆಯ ರೂಂನಲ್ಲಿ ದೇವಿಶ್ರೀ ಮೃತದೇಹ ಪತ್ತೆಯಾದ ಬಳಿಕ ಘಟನೆ ಬಹಿರಂಗವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ನೇರ ಹತ್ಯೆಯೇ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ಘಟನೆ ಗಂಭೀರ ಸ್ವರೂಪದ್ದಾಗಿರುವುದರಿಂದ ತನಿಖೆ ವೇಗಗೊಳಿಸಲಾಗಿದೆ.
ಮೃತ ದೇವಿಶ್ರೀ ರೆಡ್ಡಪ್ಪ ಮತ್ತು ಜಗದಂಭ ದಂಪತಿಯ ಕಿರಿಯ ಮಗಳು. ತಮ್ಮ ಮಗಳು ಉತ್ತಮವಾಗಿ ಓದಿ ಜೀವನದಲ್ಲಿ ದೊಡ್ಡ ಮಟ್ಟಕ್ಕೆ ಏರಲಿ ಎಂಬ ಕನಸಿನಿಂದ ಪೋಷಕರು ನಗರದಲ್ಲಿರುವ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ್ದರು. ಆದರೆ ಅಕಾಲಿಕ ಸಾವಿನಿಂದ ಕುಟುಂಬದ ಕನಸುಗಳು ಕುಸಿದು ಹೋಗಿದ್ದು, ತಮ್ಮ ಮಗಳು ಹತ್ಯೆಗೊಂಡಿರುವ ಸಂಗತಿ ಪೋಷಕರಿಗೆ ಭಾರೀ ಮರ್ಮಾಂತಿಕವಾಗಿದೆ.
ಘಟನೆ ಸಂಬಂಧವಾಗಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಪ್ರೇಮ್ ವರ್ಧನ್‌ಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಶವಗಾರದ ಮುಂದೆ ದುಖಃದಿಂದ ನಲುಗಿರುವ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಸೇರಿಕೊಂಡಿದ್ದಾರೆ.
ಈ ನಡುವೆ, ಮಾಧ್ಯಮಗಳೊಂದಿಗೆ ಮಾತನಾಡಿದ ದೇವಿಶ್ರಿಯ ದೊಡ್ಡಮ್ಮ, “ಮಗಳು ಓದಲು ಬೆಂಗಳೂರಿಗೆ ಬಂದಿದ್ದಳು. ಭಾನುವಾರ ಬೆಳಗ್ಗೆ 11 ಗಂಟೆಗೆ ತಂದೆಯೊಂದಿಗೆ ಮಾತನಾಡಿದ್ದಾಳೆ. ನಂತರ ಹಲವಾರು ಬಾರಿ ಕರೆ ಮಾಡಿದರೂ ಫೋನ್ ಸ್ವೀಕರಿಸಲಿಲ್ಲ. ಅವಳ ಸ್ನೇಹಿತೆ ಕರೆ ಮಾಡಿ ತಮ್ಮ ರೂಂಗೆ ಕರೆಸಿಕೊಂಡಿದ್ದಾರೆಂದು ತಿಳಿಸಿದ್ದಳು. ಅಲ್ಲಿ ಏನಾಗಿದೆ ಎಂಬುದು ನಮಗೆ ತಿಳಿದಿಲ್ಲ. ನಮ್ಮ ಮಗಳಿಗೆ ನ್ಯಾಯ ಸಿಗಬೇಕು,” ಎಂದು ಕಣ್ಣೀರಿಟ್ಟು ಬೇಡಿಕೊಂಡಿದ್ದಾರೆ.
ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸುಳಿವುಗಳನ್ನು ಪರಿಶೀಲಿಸುತ್ತಿದ್ದು, ಪ್ರೇಮ್ ವರ್ಧನ್ ಹಿಡಿಯಲು ವಿಶೇಷ ತಂಡವನ್ನು ರಚಿಸಲಾಗಿದೆ. ಯುವತಿಯ ಕೊಲೆಯ ಹಿಂದೆ ಇರುವ ಕಾರಣಗಳ ಬಗ್ಗೆ ನಿಖರ ಮಾಹಿತಿ ಮರಣೋತ್ತರ ವರದಿ ಮತ್ತು ಮುಂದಿನ ತನಿಖೆಯಲ್ಲಿ ಸ್ಪಷ್ಟವಾಗಲಿದೆ.
