ಬೆಂಗಳೂರು, ಅಕ್ಟೋಬರ್ 25: ಹೃದಯವಿದ್ರಾವಕ ಘಟನೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸಣ್ಣ ಕುಟುಂಬದ ಒಳಗಿನ ಕಲಹವು ನಿಷ್ಕಲ್ಮಷ ಬಾಲಕಿಯ ಜೀವವನ್ನೇ ಕಸಿದುಕೊಂಡಿದೆ. ಉಸಿರುಗಟ್ಟಿಸಿ 7 ವರ್ಷದ ಬಾಲಕಿಯನ್ನು ಮಲತಂದೆಯೇ ಹತ್ಯೆ ಮಾಡಿದ ದಾರುಣ ಘಟನೆ ನಗರದ ಹೊರವಲಯದ ಕುಂಬಳಗೋಡು ಠಾಣಾ ವ್ಯಾಪ್ತಿಯ ಕನ್ನಿಕಾ ಬಡಾವಣೆಯಲ್ಲಿ ನಡೆದಿದೆ. ಈ ಘಟನೆಯು ಸ್ಥಳೀಯರಲ್ಲಿ ಆಕ್ರೋಶ ಹಾಗೂ ತೀವ್ರ ದುಃಖ ಮೂಡಿಸಿದೆ.
ಮೃತ ಬಾಲಕಿಯನ್ನು ಸಿರಿ (7) ಎಂದು ಗುರುತಿಸಲಾಗಿದೆ. ಆರೋಪಿಯನ್ನು ದರ್ಶನ್ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಸಿರಿಯ ತಾಯಿ ಮೊದಲ ಪತಿ ಸಾವಿಗೀಡಾದ ನಂತರ ದರ್ಶನ್ ಎಂಬ ವ್ಯಕ್ತಿಯೊಂದಿಗೆ ಎರಡನೇ ವಿವಾಹ ಮಾಡಿಕೊಂಡಿದ್ದರು. ವಿವಾಹ ನಂತರ ಕೆಲವು ವರ್ಷಗಳ ಕಾಲ ಇಬ್ಬರೂ ಕನ್ನಿಕಾ ಬಡಾವಣೆಯಲ್ಲಿ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ದಂಪತಿಗಳ ನಡುವೆ ವೈಮನಸ್ಯ, ವಾಗ್ವಾದಗಳು ಹೆಚ್ಚಾಗಿದ್ದವು.
ಘಟನೆಯ ದಿನವೂ ದರ್ಶನ್ ಹಾಗೂ ಹೆಂಡತಿಯ ನಡುವೆ ತೀವ್ರ ಜಗಳ ನಡೆದಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಕೋಪಗೊಂಡ ದರ್ಶನ್, ಹೆಂಡತಿಗೆ ಪಾಠ ಕಲಿಸಬೇಕೆಂಬ ದುಷ್ಟಉದ್ದೇಶದಿಂದ 7 ವರ್ಷದ ಮಗಳಾದ ಸಿರಿಯನ್ನೇ ಬಲಿಪಶುವನ್ನಾಗಿಸಿದ್ದಾನೆ ಎನ್ನಲಾಗಿದೆ. ಆತ ಮಗು ಉಸಿರುಗಟ್ಟಿಸಿ ಕೊಲೆಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ತಿಳಿದ ತಕ್ಷಣ ಕುಂಬಳಗೋಡು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾಕ್ಷ್ಯಾಧಾರ ಸಂಗ್ರಹಿಸಿ ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ದರ್ಶನ್ ಬಂಧನಕ್ಕಾಗಿ ತೀವ್ರ ಶೋಧ ಆರಂಭಿಸಿದ್ದಾರೆ.
ಮಗುವಿನ ಅಕಾಲಿಕ ಸಾವು ಸ್ಥಳೀಯರನ್ನು ತೀವ್ರವಾಗಿ ಕಳವಳಗೊಳಿಸಿದೆ. “ಏಳು ವರ್ಷದ ಬಾಲಕಿಯಂತಹ ನಿಷ್ಕಪಟ ಜೀವವನ್ನು ಕೊಲ್ಲುವುದು ಮಾನವೀಯತೆಯೆ?” ಎಂದು ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆ ಮಾನಸಿಕ ಅಸ್ಥಿರತೆ ಮತ್ತು ಕುಟುಂಬ ಹಿಂಸೆಯ ಪರಿಣಾಮಗಳ ಕುರಿತು ಮತ್ತೆ ಚಿಂತನೆಗೆ ಆಹ್ವಾನ ನೀಡಿದೆ.
ಪೊಲೀಸರು ಆರೋಪಿ ಪತ್ತೆಗೆ ವಿವಿಧ ತಂಡಗಳನ್ನು ರಚಿಸಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
