ಮದುವೆ ನಿರಾಕರಿಸಿದ ಪ್ರೇಮಿಯಿಂದಲೇ ಗರ್ಭಿಣಿ ವಿದ್ಯಾರ್ಥಿನಿ ಕೊಲೆ – ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

ಮದುವೆ ನಿರಾಕರಿಸಿದ ಪ್ರೇಮಿಯಿಂದಲೇ ಗರ್ಭಿಣಿ ವಿದ್ಯಾರ್ಥಿನಿ ಕೊಲೆ – ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ

ಚಿತ್ರದುರ್ಗ: ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಬೆಚ್ಚಿಬೀಳಿಸುವ ಟ್ವಿಸ್ಟ್

ಚಿತ್ರದುರ್ಗ ಜಿಲ್ಲೆಯ ಹೊರವಲಯದಲ್ಲಿ ನಿನ್ನೆ ಸಂಜೆ ಪತ್ತೆಯಾದ ಸುಟ್ಟ ಶವವು ಮಹಾ ಸಂಚಲನ ಮೂಡಿಸಿತ್ತು. ಪ್ರಾರಂಭದಲ್ಲಿ ಶವದ ಗುರುತು ಪತ್ತೆಯಾಗದೆ ತನಿಖಾ ಅಧಿಕಾರಿಗಳು ತಲ್ಲಣಗೊಂಡಿದ್ದರು. ಬಳಿಕ ಶವವನ್ನು ವರ್ಷಿತಾ ಎಂಬ ದ್ವಿತೀಯ ಬಿಎ ಓದುತ್ತಿದ್ದ ಯುವತಿಯದ್ದು ಎಂದು ಗುರುತಿಸಲಾಯಿತು. ಕಾಲೇಜು ವಿದ್ಯಾರ್ಥಿನಿಯೇ ಕೊಲೆಯ ಬಲಿಯಾಗಿರುವುದು ತಿಳಿದು ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ಎದ್ದಿದೆ.

ಹೇಗೆ ಬೆಳಕಿಗೆ ಬಂತು?

ವರ್ಷಿತಾ ಡಾ. ಬಿ.ಆರ್. ಅಂಬೇಡ್ಕರ್ ಮ್ಯಾಟ್ರಿಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ವಾಸವಿದ್ದು, ಮಂಗಳವಾರ ಸಂಜೆ ಹಾಸ್ಟೆಲ್ ವಾರ್ಡನ್ಗೆ ರಜೆ ಚೀಟಿ ನೀಡಿ ಊರಿಗೆ ಹೋಗುತ್ತೇನೆ ಎಂದು ಹೇಳಿ ಹೊರಟಿದ್ದಳು. ಆದರೆ, ತನ್ನ ಊರಿಗೆ ಆಕೆ ಹೋಗಿರಲಿಲ್ಲ. ರಾತ್ರಿ 11 ಗಂಟೆಗೆ ಹೊರವಲಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾದಾಗ, ಆತಂಕಗೊಂಡ ಪೊಲೀಸರು ತನಿಖೆ ಆರಂಭಿಸಿದರು.

ಪ್ರೇಮ-ಪ್ರೇಮಿಗಳ ಕಥೆಯ ದುರಂತ

ತನಿಖೆ ಮುಂದುವರಿದಂತೆ, ವರ್ಷಿತಾ ಕೊನೆಯದಾಗಿ ಚೇತನ್ ಎಂಬಾತನನ್ನು ಸಂಪರ್ಕಿಸಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತು. ತಕ್ಷಣವೇ ಚೇತನ್ ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತನ್ನ ಕ್ರೂರ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ವಿಚಾರಣೆ ವೇಳೆ ಬಾಯಿಬಿಟ್ಟ ಚೇತನ್, ವರ್ಷಿತಾಳನ್ನು ತಾನೇ ಹತ್ಯೆ ಮಾಡಿದ್ದಾಗಿ ಪೊಲೀಸರಿಗೆ ಹೇಳಿದ್ದಾನೆ.

ಅವರಿಬ್ಬರ ನಡುವೆ ಹಲವು ದಿನಗಳಿಂದ ಪ್ರೇಮ ಸಂಬಂಧವಿತ್ತು. ವರ್ಷಿತಾಳನ್ನು ಗರ್ಭಿಣಿಯಾಗಿಸಿದ್ದ ಚೇತನ್, ಮದುವೆಯಾಗಲು ನಿರಾಕರಿಸಿದ್ದಾನೆ. “ನಿನ್ನಿಂದ ಗರ್ಭಿಣಿಯಾಗಿದ್ದೇನೆ, ನನಗೆ ಮದುವೆಯಾಗು” ಎಂದು ಪಟ್ಟು ಹಿಡಿದ ವರ್ಷಿತಾಳೊಂದಿಗೆ ಚೇತನ್ ಗಲಾಟೆ ನಡೆಸಿದ್ದಾನೆ. ಜಗಳ ತೀವ್ರಗೊಂಡ ಸಂದರ್ಭದಲ್ಲಿ ಚೇತನ್, ವರ್ಷಿತಾಳಿಗೆ ಹೊಡೆದು ಪ್ರಾಣ ಕಸಿದು, ಬಳಿಕ ಪೆಟ್ರೋಲ್ ಸುರಿದು ಶವವನ್ನು ಸುಟ್ಟಿದ್ದಾನೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ಆರೋಪಿಗೆ ಕ್ಯಾನ್ಸರ್!

ಆರೋಪಿಯ ಬಂಧನದ ಬಳಿಕ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಹತ್ಯೆ ಮಾಡಿದ ಚೇತನ್ ಕ್ಯಾನ್ಸರ್ ರೋಗಿ ಎಂದು ತಿಳಿದುಬಂದಿದೆ. ಇದರಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

16 ಮೊಬೈಲ್–ಒಂದು ಸಿಮ್ ಸತ್ಯ ಬಯಲು

ಇದಲ್ಲದೆ, ತನಿಖೆ ವೇಳೆ ವರ್ಷಿತಾ ಒಂದೇ ಸಿಮ್ ಕಾರ್ಡ್ ಬಳಸಿ 16 ವಿಭಿನ್ನ ಮೊಬೈಲ್ ಫೋನ್‌ಗಳ ಮೂಲಕ ಸಂಪರ್ಕದಲ್ಲಿದ್ದಾಳೆ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ. ಇದು ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರತಿಭಟನೆ ಮತ್ತು ಆಕ್ರೋಶ

ಈ ಹತ್ಯೆಯ ಹಿನ್ನೆಲೆಯಲ್ಲಿ ವರ್ಷಿತಾಳ ಸಂಬಂಧಿಕರು, ಕುಟುಂಬಸ್ಥರು ಹಾಗೂ ಎಬಿವಿಪಿ ಸೇರಿದಂತೆ ಹಲವು ಸಂಘಟನೆಗಳ ವಿದ್ಯಾರ್ಥಿಗಳು ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಎದುರು ಭಾರೀ ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ಸರ್ಕಲ್‌ನಿಂದ ಒನಕೆ ಓಬವ್ವ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಸ್ತೆ ತಡೆ ಮೂಲಕ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು. ಕೆಲವರು ಗೃಹ ಸಚಿವ ಡಾ. ಜಿ. ಪರಮೇಶ್ವರ ಹಾಗೂ ಸಚಿವ ಡಿ. ಸುಧಾಕರ್ ಅವರ ಫೋಟೋಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ವೇಳೆ ಪೊಲೀಸರು ಮತ್ತು ಮೃತಳ ಕುಟುಂಬಸ್ಥರ ನಡುವೆ ವಾಗ್ವಾದ ಸಂಭವಿಸಿತು. ಪ್ರತಿಭಟನೆಗೆ ದಲಿತಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳು ಸಾಥ್ ನೀಡಿದವು.

ಪೊಲೀಸರು ನೀಡಿದ ಭರವಸೆ

ಈ ಹಿನ್ನಲೆಯಲ್ಲಿ, ಡಿವೈಎಸ್ಪಿ ದಿನಕರ್ ಹಾಗೂ ಸಿಪಿಐ ಮುದ್ದುರಾಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು. “ಅವಳು ನನ್ನ ತಂಗಿಯಂತಿದ್ದಳು, ಆರೋಪಿಯನ್ನು ಕೂಡಲೇ ಬಂಧಿಸುತ್ತೇವೆ” ಎಂದು ಡಿವೈಎಸ್ಪಿ ದಿನಕರ್ ಕುಟುಂಬಸ್ಥರಿಗೆ ಭರವಸೆ ನೀಡಿದರು. ಅಂತಿಮವಾಗಿ ಚೇತನ್ ಅನ್ನು ಪೊಲೀಸರು ಬಂಧಿಸಿ, ಕೊಲೆ ಹಾಗೂ ಸಾಕ್ಷ್ಯ ನಾಶದ ಕೇಸು ದಾಖಲಿಸಿದ್ದಾರೆ.

Spread the love

Leave a Reply

Your email address will not be published. Required fields are marked *