ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ – ವೀರೇಂದ್ರ ಹೆಗ್ಗಡೆ ಅವರ ಮೊದಲ ಪ್ರತಿಕ್ರಿಯೆ
ಮಂಗಳೂರು: ಇಡೀ ರಾಜ್ಯ ಮತ್ತು ದೇಶದ ಗಮನ ಸೆಳೆದಿರುವ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ಕುರಿತು ಶ್ರೀಕ್ಷೇತ್ರ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಅವರು ತಮ್ಮ ಮೊದಲ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಪ್ರಕರಣದ ಸುತ್ತಮುತ್ತ ಹಲವು ರೀತಿಯ ಊಹಾಪೋಹಗಳು, ಆರೋಪ-ಪ್ರತ್ಯಾರೋಪಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ಹೆಗ್ಗಡೆ ಅವರ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.
ಹೆಗ್ಗಡೆ ಹೇಳಿದರು: “ಧರ್ಮಸ್ಥಳದ ಬಗ್ಗೆ ಉದ್ದೇಶಪೂರ್ವಕವಾಗಿ ಗೊಂದಲ ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ. ಇದೊಂದು ಧಾರ್ಮಿಕ ನಂಬಿಕೆಗಳ ಕೇಂದ್ರವಾಗಿದ್ದು, ಜನರು ಶ್ರದ್ಧೆಯಿಂದ ಬರುವ ಸ್ಥಳ. ಅಂತಹ ಸ್ಥಳದ ಹೆಸರನ್ನು ಹಾಳು ಮಾಡಲು ಅಸತ್ಯ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಯಾವುದೇ ರೀತಿಯ ತನಿಖೆಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ ನಿಜ ಸತ್ಯ ಬಹಿರಂಗವಾಗುತ್ತದೆ ಎಂಬ ವಿಶ್ವಾಸ ನನಗಿದೆ.”
ಅವರು ಮುಂದುವರಿಸಿದರು: “ನಾವು ಏನನ್ನೂ ಮುಚ್ಚಿಡಿಲ್ಲ. ಸರ್ಕಾರ ಅಥವಾ ತನಿಖಾ ಸಂಸ್ಥೆಗಳು ಯಾವುದೇ ರೀತಿಯ ತನಿಖೆ ನಡೆಸಲು ಬಯಸಿದರೂ ನಾವು ಸ್ವಾಗತಿಸುತ್ತೇವೆ. ತನಿಖೆಯ ಅಂತಿಮ ವರದಿ ಬರುವವರೆಗೆ ನಾವು ಕಾಯುತ್ತಿದ್ದೇವೆ. ನಮ್ಮ ಸಹಕಾರವನ್ನು ಯಾವ ಹಂತದಲ್ಲೂ ಯಾರೂ ಅನುಮಾನಿಸಬೇಕಾಗಿಲ್ಲ,” ಎಂದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಹೆಗ್ಗಡೆ ಹೇಳಿದರು: “ಕೆಲವರು ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸಿ ಯುವಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ದೇವಸ್ಥಾನ, ಧರ್ಮ ಮತ್ತು ನಂಬಿಕೆಗಳ ವಿರುದ್ಧ ಅಸತ್ಯ ಪ್ರಚಾರ ನಡೆಸಿ ಯುವಕರ ಮನಸ್ಸನ್ನು ಕಲುಷಿತಗೊಳಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಇಂತಹ ಸುಳ್ಳು ಸಂದೇಶಗಳಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತಿದೆ, ಇದು ಅತ್ಯಂತ ಖೇದಕರ,” ಎಂದರು.
ಇನ್ನೂ ಅವರು ತಮ್ಮ ಹೇಳಿಕೆಯಲ್ಲಿ ಸೇರಿಸಿದರು: “ಎಸ್‌ಐಟಿ ತನಿಖೆಯಿಂದ ನಮಗೆ ನಿರಾಳತೆ ಬಂದಿದೆ. ಎಲ್ಲಾ ಸತ್ಯ ಶೀಘ್ರದಲ್ಲೇ ಹೊರಬರುತ್ತದೆ. ಯಾವುದೂ ಮುಚ್ಚಿಡದೆ ತನಿಖೆ ನಡೆಯಲಿದೆ. ನನಗೆ ಇಡೀ ರಾಜ್ಯದಿಂದ ಕರೆಗಳು ಬರುತ್ತಿವೆ – ನೂರಾರು ಜನ ಕಾರು, ಬಸ್‌ಗಳಲ್ಲಿ ಧರ್ಮಸ್ಥಳಕ್ಕೆ ಬಂದು ನಮ್ಮನ್ನು ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ. ಕೆಲವರು 500 ಜನ ಬರ್ತೇವೆ, ಕೆಲವರು 1000 ಜನರ ತಂಡವಾಗಿ ಬರ್ತೇವೆ ಎಂದು ತಿಳಿಸಿದ್ದಾರೆ. ಆದರೆ ನಾನು ಅವರಿಗೆ ಬೇಡ ಎಂದು ಮನವಿ ಮಾಡುತ್ತಿದ್ದೇನೆ. ಜನರ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳುತ್ತೇನೆ, ಆದರೆ ಕಾನೂನಿನ ಪ್ರಕ್ರಿಯೆಯ ಮೇಲೆ ನಮಗೆ ನಂಬಿಕೆ ಇದೆ. ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷಿಸಲಾಗುವುದು ಎಂಬ ವಿಶ್ವಾಸ ನನಗಿದೆ,” ಎಂದು ಸ್ಪಷ್ಟಪಡಿಸಿದರು.
ಪ್ರಕರಣದ ಹಿನ್ನೆಲೆ
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಎಸ್‌ಐಟಿ ಕಳೆದ ಒಂದು ತಿಂಗಳಿನಿಂದ ಭೂಮಿ ಅಗೆದಿದ್ದು, ಒಟ್ಟು 17 ಕಡೆ ತೋಡಲಾಗಿದೆ. ಅದರಲ್ಲೂ ಎರಡು ಕಡೆ ಮಾನವ ಅಸ್ಥಿ ಪಂಜರಗಳು ಪತ್ತೆಯಾಗಿವೆ. ಈ ಬೆಳವಣಿಗೆಗಳು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿವೆ. ವಿಧಾನಸೌಧದಲ್ಲೂ ಈ ಪ್ರಕರಣ ತೀವ್ರವಾಗಿ ಚರ್ಚೆಗೆ ಕಾರಣವಾಗಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದ ಗರಿಷ್ಠ ಮಟ್ಟ ತಲುಪಿದೆ.
ಸುಮಾರು ಒಂದೂವರೆ ತಿಂಗಳಿಂದ ನಿರಂತರವಾಗಿ ಈ ಪ್ರಕರಣ ಮಾಧ್ಯಮಗಳಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಮುಖ್ಯ ಚರ್ಚೆಯ ವಿಷಯವಾಗಿದ್ದು, ಧರ್ಮಸ್ಥಳದ ಹೆಸರನ್ನು ಉಲ್ಲೇಖಿಸುವ ಮೂಲಕ ಗೊಂದಲ ಮತ್ತು ಭ್ರಮೆ ಸೃಷ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಇಂತಹ ಸಂದರ್ಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಹೇಳಿಕೆ ಸಾರ್ವಜನಿಕರಲ್ಲಿ ಸ್ಪಷ್ಟತೆ ಮೂಡಿಸಿದೆ. ಅವರು ತನಿಖಾ ಪ್ರಕ್ರಿಯೆಯ ಮೇಲೆ ಸಂಪೂರ್ಣ ನಂಬಿಕೆ ವ್ಯಕ್ತಪಡಿಸಿದ್ದು, ಯಾವುದೇ ರೀತಿಯ ಅಪರಾಧಿಗಳಿಗೆ ಕಾನೂನಿನ ಪ್ರಕಾರ ತಕ್ಕ ಶಿಕ್ಷೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.