ಮಗುವನ್ನು ರಕ್ಷಿಸಲು ಹೋದ ತಂದೆ ಟ್ರ್ಯಾಕ್ಟರ್ಗೆ ಬ*
ಹಾಸನ: ಮೂರು ವರ್ಷದ ಮಗು ಆಟವಾಡುತ್ತಾ ಟ್ರ್ಯಾಕ್ಟರ್‌ನ ಕೀ ಆನ್ ಮಾಡಿದ ಪರಿಣಾಮ, ಏಕಾಏಕಿ ಮುಂದಕ್ಕೆ ಚಲಿಸಿದ ಟ್ರ್ಯಾಕ್ಟರ್ ಚಕ್ರ ತಂದೆಯ ಮೇಲೆ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಹೊಳೆನರಸೀಪುರ ಪಟ್ಟಣದ ಕೋಟೆ ಒಕ್ಕಲಿಗರ ಬೀದಿಯಲ್ಲಿ ನಡೆದಿದೆ.
ಮೃತರನ್ನು ಯಶ್ವಂತ್ (37) ಎಂದು ಗುರುತಿಸಲಾಗಿದೆ. ಸಾರಿಗೆ ಸಂಸ್ಥೆಯಲ್ಲಿ ನೌಕರರಾಗಿದ್ದ ಯಶ್ವಂತ್ ಅವರು ಅರಕಲಗೂಡು ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೊಸ ಮನೆ ನಿರ್ಮಾಣ ಮಾಡುತ್ತಿದ್ದ ಅವರು, ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಆರ್‌ಸಿಸಿ ಕಾಮಗಾರಿಗೆ ಅಗತ್ಯವಿದ್ದ ಸೆಂಟ್ರಿಂಗ್ ಸಾಮಗ್ರಿಗಳನ್ನು ಟ್ರ್ಯಾಕ್ಟರ್ ಮೂಲಕ ಮನೆಗೆ ತರಿಸಿದ್ದರು.
ಈ ವೇಳೆ ತಮ್ಮ ಮೂರು ವರ್ಷದ ಮಗುವನ್ನು ಟ್ರ್ಯಾಕ್ಟರ್ ಮೇಲೆ ಕೂರಿಸಿಕೊಂಡು ಆಟವಾಡಿಸುತ್ತಿದ್ದರು ಎನ್ನಲಾಗಿದೆ. ಮಗು ಟ್ರ್ಯಾಕ್ಟರ್‌ನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅದರ ಕೀ ಆನ್ ಮಾಡಿದೆ. ಕೀ ಆನ್ ಆಗುತ್ತಿದ್ದಂತೆ ಟ್ರ್ಯಾಕ್ಟರ್ ಏಕಾಏಕಿ ಮುಂದಕ್ಕೆ ಚಲಿಸಿದೆ.
ಮಗುವನ್ನು ರಕ್ಷಿಸಲು ಹೋಗಿ ದುರಂತ
ಟ್ರ್ಯಾಕ್ಟರ್ ಏಕಾಏಕಿ ಚಲಿಸುತ್ತಿದ್ದಂತೆ ಮಗು ಕೆಳಗೆ ಬೀಳುವ ಸಾಧ್ಯತೆ ಕಂಡು ಯಶ್ವಂತ್ ಗಾಬರಿಗೊಂಡಿದ್ದಾರೆ. ಮಗುವನ್ನು ರಕ್ಷಿಸುವ ಉದ್ದೇಶದಿಂದ ಅವರು ತಕ್ಷಣ ಮುಂದಾಗಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್‌ನ ಚಕ್ರ ಯಶ್ವಂತ್ ಅವರ ಮೇಲೆ ಹರಿದಿದೆ.
ಅಪಘಾತದಲ್ಲಿ ಯಶ್ವಂತ್ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದರೂ ಗಾಯಗಳ ತೀವ್ರತೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವನ್ನು ರಕ್ಷಿಸಲು ಮುಂದಾದ ತಂದೆಯೇ ದುರಂತದಲ್ಲಿ ಮೃತಪಟ್ಟಿರುವುದು ಕುಟುಂಬಕ್ಕೆ ಆಘಾತ ಉಂಟುಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟ್ರ್ಯಾಕ್ಟರ್ ಹೇಗೆ ಚಲಿಸಿತು, ಅಪಘಾತ ಸಂಭವಿಸಿದ ನಿಖರ ಸಂದರ್ಭ ಸೇರಿದಂತೆ ಘಟನೆ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
